ತಿರುಪತಿ: ತಿರುಮಲ ತಿರುಪತಿ ದೇವಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ತಿಮ್ಮಪ್ಪನ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಬಂದಿರುವ ಭಕ್ತರು ಉಚಿತ ಸರ್ವ ದರ್ಶನ ಕ್ಯೂನಲ್ಲಿ ಕಿಲೋಮೀಟರ್‌ಗಟ್ಟಲೆ ಸಾಲು ನಿಂತಿದ್ದಾರೆ.
ದೇವಾಲಯ ಮೂಲಗಳ ಪ್ರಕಾರ, ನಿನ್ನೆ ಒಂದೇ ದಿನದಲ್ಲಿ 81 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಬೆಳಿಗ್ಗೆ 8 ಗಂಟೆಯ ನಂತರ ಸರ್ವ ದರ್ಶನಕ್ಕೆ ಬರುವ ಭಕ್ತರಿಗೆ 18 ರಿಂದ 24 ಗಂಟೆಗಳ ನಿರೀಕ್ಷೆ ಸಮಯ ಎದುರಾಗುತ್ತಿದೆ. ಟೋಕನ್ ಪಡೆದ ಭಕ್ತರಿಗೆ ಕೂಡ 4 ರಿಂದ 6 ಗಂಟೆಗಳ ಕಾಯುವ ಅವಧಿ ಇದೆ ಎಂದು ತಿಳಿದುಬಂದಿದೆ.
ದರ್ಶನಕ್ಕೆ ಬಂದ ಭಕ್ತರಲ್ಲಿ ನಿನ್ನೆ ಒಂದೇ ದಿನದಲ್ಲಿ 44,874 ಮಂದಿ ಮುಡಿಕೊಟ್ಟಿದ್ದಾರೆ. ಭಕ್ತರಿಂದ ಬಂದ ಕಾಣಿಕೆ ಮೂಲಕ ಹುಂಡಿಗೆ ಸುಮಾರು 3.76 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಭಕ್ತರ ಹೆಚ್ಚಳದೊಂದಿಗೆ ಪ್ರಸಾದ ವಿತರಣೆ ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ನಿನ್ನೆ ಒಂದೇ ದಿನದಲ್ಲಿ ಸುಮಾರು 4.42 ಲಕ್ಷ ಲಡ್ಡುಗಳು ಮಾರಾಟವಾಗಿದ್ದು, 3.31 ಲಕ್ಷಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಪಡೆದಿದ್ದಾರೆ. ಭಕ್ತರ ಆರೋಗ್ಯದ ಹಿನ್ನೆಲೆಯಲ್ಲಿ 3,916 ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಭಾರೀ ಜನಸಂದಣಿಯನ್ನು ನಿಯಂತ್ರಿಸಲು ತಿರುಮಲ ತಿರುಪತಿ ದೇವಾಲಯ ಆಡಳಿತವು ಹೆಚ್ಚುವರಿ ಭದ್ರತೆ ಮತ್ತು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



