ತಿರುವನಂತಪುರಂ: ಮಕರ ಸಂಕ್ರಾಂತಿ ಎಂದರೆ ದೇಶಾದ್ಯಂತ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳ ಪ್ರತಿಧ್ವನಿ. ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು, ಕಠಿಣ ವೃತಗಳನ್ನು ಪಾಲಿಸಿ, ಶಬರಿಮಲೆಗೆ ಹೊರಡುವ ಲಕ್ಷಾಂತರ ಭಕ್ತರ ದೃಶ್ಯವೇ ಒಂದು ಭಕ್ತಿ ಹಬ್ಬ.
ಇಂದು ಮಕರ ಸಂಕ್ರಾಂತಿ. ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಪವಿತ್ರ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಶಬರಿಮಲೆಯಲ್ಲಿ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು, ಇನ್ನೂ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಅಯ್ಯಪ್ಪನ ತತ್ವವೇ “ತತ್ವಮಸಿ” — ನೀನೇ ಆ ದೇವರು ಎಂಬ ವೇದ ಮಹಾವಾಕ್ಯದ ಸಾರ. ಅಜ್ಞಾನದಿಂದ ಜ್ಞಾನಕ್ಕೆ ದಾರಿ ತೋರಿಸುವ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಲಕ್ಷಾಂತರ ಭಕ್ತರು ಮಾಲೆ ಧರಿಸಿ ವೃತಾಚರಣೆ ನಡೆಸುತ್ತಾರೆ. ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಭಕ್ತರ ಸಂಖ್ಯೆಯ ಭಾರೀ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ವ್ಯವಸ್ಥೆ ಭಾರೀ ಮುನ್ನೆಚ್ಚರಿಕೆ ವಹಿಸಿದೆ. 1,000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ, ಬಿಗಿ ಪೊಲೀಸ್ ಬಂದೋಬಸ್ತ್, ಆರೋಗ್ಯ ಮತ್ತು ತುರ್ತು ಸೇವೆಗಳ ವ್ಯವಸ್ಥೆ
ಆದರೆ ಈ ಭಕ್ತಿ ಸಂಭ್ರಮದ ನಡುವೆ, ಕೇರಳದಲ್ಲಿ ವಿವಾದವೂ ಭುಗಿಲೆದ್ದಿದೆ. ಎರೆಮಲೆಯಲ್ಲಿ ಮಾಲಾಧಾರಿಗಳ ವಾಹನಗಳನ್ನು ನಿಲ್ಲಿಸಿ, “ಖಾಸಗಿ ವಾಹನ ಬಿಡುವುದಿಲ್ಲ, ಕೇರಳ ಸರ್ಕಾರಿ ಬಸ್ಲ್ಲೇ ಹೋಗಬೇಕು” ಎಂದು ಪೊಲೀಸರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
“ನಾವು ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಈಗ ಮತ್ತೆ ಸರ್ಕಾರಿ ಬಸ್ಗೆ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇದು ನಮ್ಮ ಭಕ್ತಿ ಮತ್ತು ಶ್ರದ್ಧೆಗೆ ಅವಮಾನ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಭಕ್ತರ ಮೇಲೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ.



