ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಶುಕ್ರವಾರ ಸಂಪತ್ತಿನ ಒಡತಿ ವರಮಹಾಲಕ್ಷ್ಮೀ ವೃತಾಚರಣೆಯನ್ನು ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಮಹಿಳೆಯರು ಅತ್ಯಂತ ಸಡಗರ, ಸಂಭ್ರಮ, ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಬೆಳಿಗ್ಗೆಯೇ ಮನೆಯ ಮುಂದೆ ರಂಗೋಲಿ ಬಿಡಿಸಿ, ತಳಿರು-ತೋರಣ ಕಟ್ಟಿ, ಅಲಂಕಾರದ ವಸ್ತುಗಳಿಂದ ಮನೆಯನ್ನು ಸಿಂಗರಿಸಿದ್ದರು. ದೇವರ ಜಗುಲಿ ಮತ್ತು ಮುಖ್ಯ ಸ್ಥಳದಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಮಂಟಪ ಸಿದ್ಧಗೊಳಿಸಿ ಹಳದಿ ಹಿಟ್ಟಿನಿಂದ ಮೂಗು, ಕಣ್ಣು, ಕಿವಿ, ಮಾಡಿ ಅದಕ್ಕೆ ಆಭರಣಗಳನ್ನು ಹಾಕಿದ ತೆಂಗಿನ ಕಾಯಿಯಿಂದ ಕಳಸ (ಲಕ್ಷ್ಮೀ ದೇವಿ) ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿದರು.
ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಹಣ್ಣು-ಹೂವು, ಅರಿಷಿಣ-ಕುಂಕುಮ, ಹಸಿರು ರವಿಕೆ ಉಡಿ ತುಂಬಿದ ಬಳಿಕ ಮುತ್ತೈದೆಯರು ಪ್ರಸಾದ ಸ್ವೀಕರಿಸಿ ಕುಟುಂಬಕ್ಕೆ ಶುಭ ಹಾರೈಸಿದರು.
ಈ ಪೂಜೆ ಕೇವಲ ಐಶ್ವರ್ಯ ಪ್ರಾಪ್ತಿಗಷ್ಟೇ ಅಲ್ಲದೇ ಕುಟುಂಬ-ಸಮಾಜದ ಶ್ರೇಯೋಭಿವೃದ್ಧಿ, ಆರೋಗ್ಯ, ಸಂಪತ್ತು, ಜ್ಞಾನ, ಧೈರ್ಯ, ಲೋಕ ಕಲ್ಯಾಣ, ಶಾಂತಿ, ನೆಮ್ಮದಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶೃದ್ಧಾ ಭಕ್ತಿಯಿಂದ ಮೊರೆಯಿಡುವುದೇ ಈ ಹಬ್ಬದ ಮಹತ್ವವಾಗಿದೆ ಎನ್ನುತ್ತಾರೆ ಕಳೆದ ಅನೇಕ ವರ್ಷಗಳಿಂದ ಈ ವೃತಾಚರಣೆ ಮಾಡುತ್ತಿರುವ ಸರಸ್ವತಿ ಹೊನ್ನೆಗೌಡ್ರ, ನಿರ್ಮಲಾದೇವಿ ಪವಾಡದ, ಹೇಮಾ ಬಾಳಿಕಾಯಿ, ಲೀಲಾ ಸಂಶಿ, ಶೃತಿ ಮೆಣಸಿಕಾಯಿ ಮುಂತಾದವರು.