ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ಡಿಜಿಪಿ ರಾಮಚಂದ್ರರಾವ್ ಪ್ರಕರಣದಲ್ಲಿ ಕೊನೆಗೂ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.
ಕಚೇರಿಯೊಳಗೇ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆಸುತ್ತಿರುವುದಾಗಿ ಆರೋಪಿಸಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಪ್ರಕರಣ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇವಲ ವಿಡಿಯೋ ಮಾತ್ರವಲ್ಲದೆ, ಸಂಬಂಧಿತ ಆಡಿಯೋ ಕ್ಲಿಪ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು.
ಪ್ರಕರಣ ಬೆಳಕಿಗೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎಸ್. ಸಲೀಂ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಇನ್ನು, ಡಿಜಿಪಿ ರಾಮಚಂದ್ರರಾವ್ ಅವರು ಮಾಧ್ಯಮಗಳ ಮುಂದೆ, “ಇವೆಲ್ಲವೂ ಎಐ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳು. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.
ಆದರೆ, ಸಾರ್ವಜನಿಕ ಒತ್ತಡ, ರಾಜಕೀಯ ಪ್ರತಿಕ್ರಿಯೆಗಳು ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸರ್ಕಾರ, ನಿವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಅವರನ್ನು ಅಮಾನತುಗೊಳಿಸಿ ಸ್ಪಷ್ಟ ಸಂದೇಶ ನೀಡಿದೆ.
ಈ ಬೆಳವಣಿಗೆ ಪೊಲೀಸ್ ಇಲಾಖೆಯ ಶಿಸ್ತು, ಗೌರವ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ಮಹತ್ವದ ಪ್ರಕರಣವಾಗಿ ಪರಿಗಣಿಸಲಾಗುತ್ತಿದೆ.



