ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಪ್ರಕರಣ ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದ್ದು, ಇದೀಗ ಸರ್ಕಾರ ಕಠಿಣ ನಿಲುವು ತಳೆದಿದೆ. ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟವಾಗಿ, “ಇಂತಹ ಘಟನೆಗಳು ಯಾರಿಗೂ ಗೌರವ ತರೋದಿಲ್ಲ” ಎಂದು ಹೇಳಿ ಬಲವಾದ ಸಂದೇಶ ನೀಡಿದ್ದಾರೆ.
ನಿನ್ನೆ ಈ ವಿಷಯ ತಿಳಿದಾಗ ನಾನು ಅಸ್ವಸ್ಥರಾಗಿದ್ದೆ. ಮಧ್ಯಾಹ್ನ ನಂತರ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಬಳಿಕ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಯಾವುದೇ ಇಲಾಖೆ ಆಗಿರಲಿ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಸಿಎಂ ಕೂಡ ಈ ವಿಚಾರದಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ದೊಡ್ಡ ಅಧಿಕಾರಿ, ಸೀನಿಯರ್ ಎಂಬ ಕಾರಣ ನೀಡಿ ಯಾರನ್ನೂ ಉಳಿಸಬಾರದು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಗೃಹಸಚಿವ ಹೇಳಿದ್ದಾರೆ.
ಸಿಎಂಗೆ ವಿಷಯ ತಿಳಿಸಿದ ತಕ್ಷಣವೇ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಆದರೆ ರಾಮಚಂದ್ರ ರಾವ್ ಆರೋಪಗಳನ್ನು ಸುಳ್ಳು ಎಂದು ಹೇಳಿರುವ ಹಿನ್ನೆಲೆ, ತನಿಖೆಯಲ್ಲಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಬಿಜೆಪಿ ಪಕ್ಷ ಬಂಧನಕ್ಕೆ ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ತನಿಖೆ ನಂತರ ಯಾವ ಮಟ್ಟದ ಕ್ರಮ ಬೇಕಾದರೂ ಆಗಬಹುದು. ಅಗತ್ಯವಿದ್ದರೆ ಡಿಸ್ಮಿಸ್ಗೂ ಅವಕಾಶ ಇದೆ. ತಕ್ಷಣ ಕ್ರಮ ತೋರಿಸಬೇಕು ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ. ಯಾವುದೇ ಮುಲಾಜಿ ಇಲ್ಲದೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.



