ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಪುಢಾರಿ ನಾಯಕ ರಾಜೀವ್ ಗೌಡ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ನಿನ್ನೆ ಮಂಗಳೂರಿನಿಂದ ರೈಲಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದ ರಾಜೀವ್ ಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿ ಪೌರಾಯುಕ್ತೆ ಅಮೃತಾ ಗೌಡಗೆ ರಾಜೀವ್ ಗೌಡ ಫೋನ್ ಮೂಲಕ ಧಮ್ಕಿ ಹಾಕಿದ್ದನು. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ನೀಡಿದ್ದ ಆಡಿಯೋ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಪೌರಾಯುಕ್ತೆ ಅಮೃತಾ ಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ತಲೆಮರೆಸಿಕೊಂಡು ಪರಾರಿಯಾಗಿದ್ದ.
ಬಂಧನದಿಂದ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೂ ಮುಂದಾಗಿದ್ದ ಆತ, ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರೋಪಿಯ ಬಂಧನ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೇ ನಡುವೆ, ರಾಜೀವ್ ಗೌಡನ ಕಾರು ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಈ ಮಹತ್ವದ ಸುಳಿವಿನ ಆಧಾರದಲ್ಲಿ ಶಿಡ್ಲಘಟ್ಟ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆರೋಪಿಯ ಚಲನವಲನಗಳ ಮೇಲೆ ನಿಗಾ ವಹಿಸಿ ಕೇರಳಕ್ಕೆ ತೆರಳಿದ ಪೊಲೀಸರು, ರಾಜೀವ್ ಗೌಡನನ್ನು ಅಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕೇರಳದಿಂದ ಆರೋಪಿಯನ್ನು ನೇರವಾಗಿ ಶಿಡ್ಲಘಟ್ಟಕ್ಕೆ ಕರೆತರುತ್ತಿರುವ ಪೊಲೀಸರು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಬಳಿಕ ರಾಜೀವ್ ಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.



