ವಿಜಯಸಾಕ್ಷಿ ಸುದ್ದಿ, ಶಿಗ್ಗಾಂವಿ: ಬಹು ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಮಾನವ ಜೀವನ ಸಾರ್ಥಕಗೊಳ್ಳಲು ಧರ್ಮಾಚರಣೆ ಅವಶ್ಯಕ. ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನ ಬುದ್ಧಿಶಕ್ತಿಗೆ ತಕ್ಕಂತೆ ಭಾವನೆಗಳು ಬೆಳೆಯುತ್ತಿಲ್ಲ. ಉದಾತ್ತವಾದ ಧರ್ಮದ ಅರ್ಥ ವ್ಯಾಪ್ತಿಯನ್ನು ಅರಿಯದೇ ಜಾತಿಗೆ ಜೋಡಿಸಿ ಧರ್ಮಕ್ಕೆ ಚ್ಯುತಿ ತರುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಸತ್ಯ ಧರ್ಮಕ್ಕೆ ಯಾವಾಗಲೂ ಜಯ ಇದ್ದೇ ಇರುತ್ತದೆ. ಆದರ್ಶ ಗುರಿಯೊಂದಿಗೆ ಸಮರ್ಥ ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಮಾನವೀಯ ಮೌಲ್ಯಗಳನ್ನು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಬೋಧಿಸಿ ಜನಸಮುದಾಯವನ್ನು ಸನ್ಮಾರ್ಗಕ್ಕೆ ಕರೆ ತಂದಿರುವ ಪ್ರಾಮಾಣಿಕ ಪ್ರಯತ್ನ ಮರೆಯಲಾಗದು ಎಂದರು.
ಭಾರತ ಸೇವಾ ಸಂಸ್ಥೆ ಬನ್ನೂರ ಇದರ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 5 ಸಾವಿರ ವರ್ಷಗಳ ಇತಿಹಾಸ ಹೊಂದಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನು ಬಯಸುತ್ತ ಬಂದಿದೆ. ಈ ಧರ್ಮದ ತತ್ವಗಳನ್ನು ಅರಿತು ಆಚರಿಸಿ ಬಾಳಿದರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವೆಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಗಂಜಿಗಟ್ಟಿ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯರು, ಹಿರೆಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು.
ತಿಪ್ಪಣ್ಣ ಸಾತಣ್ಣನವರ, ನಾಗೇಶ ಶರ್ಮಾ, ಶಿವಾನಂದ ಮ್ಯಾಗೇರಿ, ಟಿ.ವಿ. ಸುರಗಿಮಠ, ಹಿರೇಮಣಕಟ್ಟಿ ಮತ್ತು ಕಬನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ಸಮಾರಂಭವನ್ನು ಸಂಘಟಿಸಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶ್ರೀ ಕಲ್ಮೇಶ್ವರ ಕಲಾ ತಂಡ ಮುಗಳಿ ಇವರಿಂದ ಭಕ್ತಿಗೀತೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸ್ವಾಗತಿಸಿ ನಿರೂಪಿಸಿದರು.