ಮಂಗಳೂರು: ಧರ್ಮಸ್ಥಳದಲ್ಲಿ ಕಳೆದ 10 ವರ್ಷಗಳ ಹಿಂದೆ ನೂರಾರು ಶವಗಳನ್ನು ಹೂಳಿದ್ದೇನೆ ಎಂದು ತಿಳಿಸಿರುವ ಅನಾಮಿಕ ವ್ಯಕ್ತಿ, ಸೋಮವಾರ ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಶವಗಳನ್ನು ಹೂತಿರುವ ಸ್ಥಳಗಳನ್ನು ಗುರುತಿಸಿ ತೋರಿಸಿದ್ದಾನೆ. 13 ಸ್ಥಳಗಳನ್ನ ಗುರುತಿಸಿದ್ದು, ಈ ಸಂಬಂಧ ಶವಗಳನ್ನು ಹೊರತೆಗೆಯುವ ಕಾರ್ಯ ಶುರು ಮಾಡಲಾಗುತ್ತಿದೆ.
ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್ಐಟಿ (SIT) ಮುಂದಾಗಿದೆ. ಅದಕ್ಕಾಗಿ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ ವಿಶೇಷ ತನಿಖಾ ತಂಡ. ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ.
ಅಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇಂದಿನಿಂದ ಸಮಾಧಿ ಅಗೆಯುವ ಕಾರ್ಯ ಶುರುವಾಗಲಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿ ಈಗಾಗಲೇ ಸಿಬ್ಬಂದಿಗಳು ಬಂದಿದ್ದು, 12 ಕಾರ್ಮಿಕರ ತಂಡ ಆರೆ, ಪಿಕಾಸಿ, ಗುದ್ದಲಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಕೆಲವೇ ಕ್ಷಣಗಳಲ್ಲಿ ಇವರೆಲ್ಲರ ಸಮಕ್ಷಮದಲ್ಲಿ ಸಮಾಧಿ ಅಗೆಯುವ ಕೆಲಸ ಶುರುವಾಗಲಿದೆ.