ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಕೃತ್ಯಗಳು ನಡೆದಿವೆ ಎಂದು ಹೇಳಲಾಗುತ್ತಿದ್ದು, ಇದು ದೇಶ ಕಂಡ ಅತ್ಯಂತ ಗಂಭೀರ ಪ್ರಕರಣ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ಎಸ್‌ಐಟಿ ಮೂಲಕ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ, ವಕೀಲ ತಾಹಿರ್ ಹುಸೇನ್ ಅಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮಸ್ಥಳದಲ್ಲಿ ಮೂರು ದಶಕಗಳಲ್ಲಿ ನೂರಾರು ಹೆಣ್ಣುಮಕ್ಕಳ ಶವಗಳನ್ನು ಹೂತುಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ದೂರು ನೀಡಿದ್ದರೂ ಸರ್ಕಾರ ತನಿಖೆ ಮಾಡಲು ಹಿಂದೇಟು ಹಾಕುತ್ತಿದೆ. ಕೃತ್ಯಗಳ ಮಹತ್ವದ ಸಾಕ್ಷಿಯೆನಿಸುವ ವ್ಯಕ್ತಿಯೇ ಖುದ್ದಾಗಿ ದ.ಕ ಎಸ್ಪಿಗೆ ದೂರು ನೀಡಿದ್ದರೂ ರಾಜ್ಯದ ಗೃಹ ಸಚಿವರು ಈವರೆಗೂ ಮೌನವಾಗಿದ್ದಾರೆ. ಪ್ರಭಾವಿಗಳ ಸುಪರ್ದಿಯಲ್ಲಿ ನಡೆಯುವ ಜನಸಾಮಾನ್ಯರ ಸಾವು-ನೋವುಗಳಿಗೆ ನ್ಯಾಯ ನಿರಾಕರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿರುವ ಅವರು, ಸರಕಾರವು ತನ್ನ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.


