ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋಗೋದ್ರ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಧರ್ಮಸ್ಥಳ ತಲೆ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪ್ರಣಬ್ ಮೊಂಹತಿ ಅವರು ಕೇಂದ್ರ ಸೇವೆಗೆ ಹೋಗುತ್ತಾರಾ ಎಂದು ಮಾಧ್ಯಮಗಳು ಇಂದು ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಪ್ರಶ್ನಿಸಿದವು.
ಮಾಧ್ಯಮಗಳಿಂದ ಈ ಗೊಂದಲ ಸೃಷ್ಟಿಯಾಗಿದೆ. ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಅಧಿಕಾರಿಗಳ ಪಟ್ಟಿಯಲ್ಲಿ ಪ್ರಣಬ್ ಮೊಹಂತಿ ಅರ್ಹತೆ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆ. ಕೇಂದ್ರ ಸರ್ಕಾರ ಕೇಂದ್ರ ಸೇವೆಗೆ ಅರ್ಹತೆ ಪಡೆಯುವ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಿರಿತನ, ತನಿಖಾ ಸಾಮರ್ಥ್ಯ, ಅನುಭವಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪಟ್ಟಿಗೆ ಇಡೀ ದೇಶದ ಐಪಿಎಸ್ ಅಧಿಕಾರಿಗಳ ಹೆಸರನ್ನು ಸೇರಿಸಿ ಬಿಡುಗಡೆ ಮಾಡುತ್ತದೆ ಎಂದರು.
ಈ ಪಟ್ಟಿಯಲ್ಲಿ ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಕೇಂದ್ರ ಸರ್ಕಾರ ಹುದ್ದೆ ನೀಡುವುದಿಲ್ಲ. ಕೇಂದ್ರ ಸರ್ಕಾರ ಪ್ರಣಬ್ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸಿಕೊಡಿ ಎಂದು ನಮಗೆ ಪತ್ರ ಬರೆಯಬೇಕು. ಅವರನ್ನು ಕಳುಹಿಸುವುದು ಬಿಡುವುದು ನಮ್ಮ ಆಯ್ಕೆ. ಪಟ್ಟಿಯಲ್ಲಿ ಹೆಸರು ಬಂದ ಮಾತ್ರಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.