ಬೆಂಗಳೂರು:- ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ ಮೂಲಕ ಸುಳ್ಳುಗಳ ಸರಮಾಲೆ ಸೃಷ್ಟಿ ಮಾಡಿದ್ದ ಯೂಟ್ಯೂಬರ್ ಸಮೀರ್ ಗೆ ಇದೀಗ ಬಂಧನ ಭೀತಿ ಶುರುವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಮೇಲೆ ಮತ್ತೆ ಮೂರು ಎಫ್‌ಐಆರ್ ದಾಖಲಾಗಿದೆ. ಒಂದು ಕೇಸ್ ನಲ್ಲಿ ಜಾಮೀನು ಪಡೆದು ರಿಲ್ಯಾಕ್ಸ್ ಆಗಿರುವ ಸಮೀರ್ ಗೆ ಬಂಧನದ ಭೀತಿ ಕಾಡುತ್ತಿದೆ. ಇನ್ನೂ ಈಗಾಗಲೇ ಧರ್ಮಸ್ಥಳ ಬುರುಡೆ ಕಥೆ ಹೆಣೆದಿದ್ದ ಮುಸುಕುಧಾರಿ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ ಬಂಧಿಸಿದ ಬೆನ್ನಲ್ಲೇ ಸಮೀರ್‌ಗೆ ಬಂಧನ ಭೀತಿ ಎದುರಾಗಿದೆ. ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ ಕೂಡ ದಾಖಲೆಗಳನ್ನು ಕೆದಕಲು ಆರಂಭಿಸಿದೆ.
ಈಗಾಗಲೇ ಪೊಲೀಸರು ಬಳ್ಳಾರಿಯ ನಿವಾಸಕ್ಕೆ ತೆರಳಿ ನೋಟಿಸ್ ಅಂಟಿಸಿದ್ದಾರೆ. ಬಂಧನ ಭೀತಿಯಲ್ಲಿರುವ ಸಮೀರ್ ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ಪ್ರಕರಣದಲ್ಲಿ ಜಾಮೀನು ಪಡೆದಿರುವ ಸಮೀರ್ ನಾಳೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ನಾಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್ ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ. ಹೀಗಾಗಿ ಅರೆಸ್ಟ್ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.