ಮಂಗಳೂರು:- ಧರ್ಮಸ್ಥಳದ ಯುವತಿ ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. 22 ವರ್ಷದ ಆಕಾಂಕ್ಷಾ ಎಸ್. ನಾಯರ್ ಮೃತ ಯುವತಿ.
ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಮೃತ ಆಕಾಂಕ್ಷಾ ಪೋಷಕರಾದ ಸುರೇಂದ್ರ ಮತ್ತು ಸಿಂಧೂದೇವಿ ನಿನ್ನೆಯೇ ಪಂಜಾಬ್ಗೆ ತೆರಳಿದ್ದಾರೆ. ಘಟನೆ ಕುರಿತು ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಂಜಾಬ್ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದ ಆಕಾಂಕ್ಷಾ, 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕೆ ಜಪಾನ್ಗೆ ಹೋಗಲು ಪ್ಲ್ಯಾನ್ ಕೂಡ ನಡೆಸಿದ್ದರು. ಇದಕ್ಕಾಗಿ ನಿನ್ನೆ ಕಾಲೇಜಿಗೆ ತೆರಳಿ ಸರ್ಟಿಫಿಕೇಟ್ ಪಡೆದುಕೊಂಡು ಬಂದಿದ್ದರು. ಈ ವಿಚಾರವನ್ನು ಫೋನ್ ಮಾಡಿ ಆಕಾಂಕ್ಷಾ ತನ್ನ ಪೋಷಕರಿಗೂ ತಿಳಿಸಿದ್ದಾಳೆ. ಆದರೆ ದಿಢೀರ್ ಈ ಘಟನೆ ನಡೆದಿರೋದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ.
ಇನ್ನು ಪಂಜಾಬ್ಗೆ ತೆರಳುತ್ತಿದ್ದಾಗ ಮೃತ ಆಕಾಂಕ್ಷಾ ಪೋಷಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಶಾಸಕ ಹರೀಶ್ ಪೂಂಜಾ ಸಾಂತ್ವನ ಹೇಳಿದ್ದಾರೆ. ಈ ವೇಳೆ ‘ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕೊಲೆ ಆಗಿರಬಹುದು’ ಎಂದು ಆಕಾಂಕ್ಷಾ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.