ವಿಜಯಸಾಕ್ಷಿ ಸುದ್ದಿ, ಧಾರವಾಡ : ವಿದ್ಯಾಕಾಶಿ ಎಂದೇ ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂಬರ್ ಒನ್ ಸ್ಥಾನಕ್ಕೆ ತರುವ ಮೂಲಕ ಹೆಸರಿಗೆ ತಕ್ಕಂತೆ ವಿದ್ಯಾಕಾಶಿ ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ಆರಂಭಿಸಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು, ಪರೀಕ್ಷಾ ತರಬೇತಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೊಡಿಸಿದ್ದು, ಎಲ್ಲರ ಸಹಕಾರ, ಪ್ರಯತ್ನದಿಂದ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರವಾಡದ ಹಿರಿಯ ಶಿಕ್ಷಣ ತಜ್ಞರು, ಖಾಸಗಿ ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಕುರಿತು ಸಮಾಲೋಚನೆ ಹಾಗೂ ಕ್ರಿಯಾಯೋಜನೆ ರೂಪಿಸುವದಕ್ಕಾಗಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ವರ್ಷದ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 72.67ರಷ್ಟು ಸಾಧನೆ ಮಾಡುವ ಮೂಲಕ ಧಾರವಾಡ ಜಿಲ್ಲೆ 22ನೇ ಸ್ಥಾನ ಪಡೆದಿದೆ. ಜಿಲ್ಲೆಯ 495 ಪ್ರೌಢಶಾಲೆಗಳ ಪೈಕಿ ಮೂರು ಶಾಲೆಗಳು ಶೂನ್ಯ ಸಾಧನೆ ಮಾಡಿದ್ದು, 30 ಶಾಲೆಗಳು ಶೇ. 100ರಷ್ಟು ಸಾಧನೆ ಮಾಡಿವೆ ಎಂದು ಹೇಳಿದರು.
ಒಟ್ಟು ಹತ್ತನೇ ವರ್ಗದ ಮಕ್ಕಳ ಪೈಕಿ 8,237 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ, ಅವರನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಸುಧಾರಿಸಿ ಈ ಸಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಚಾಲೆಂಜ್ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣಿತರು, ಶಾಲಾ ಅಭಿವೃದ್ಧಿ ಸಮಿತಿಯವರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಮಕ್ಕಳಲ್ಲಿ ಓದುವ ಭರವಸೆ ಮೂಡಿಸುವ ಅಗತ್ಯವಿದೆ. ಓದಿನಲ್ಲಿ ಮಕ್ಕಳು ಹಿಂದುಳಿಯಲು ಶಿಕ್ಷಕರು ಮಾತ್ರ ಕಾರಣರಲ್ಲ, ಅದರ ಹೊಣೆಯನ್ನು ಪಾಲಕರು ಸೇರಿದಂತೆ ಎಲ್ಲರೂ ವಹಿಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು, ಅವರ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಮಾಜಿ ನಿರ್ದೇಶಕ ಹಾಗೂ ಧಾರವಾಡ ಐಐಟಿ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ ಮಾತನಾಡಿ, ಫಲಿತಾಂಶ ಸುಧಾರಣೆಗೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ತರಬೇತಿ ಮೂಲಕ ಓದು, ಕಲಿಕೆಯ ಕೌಶಲ್ಯ ಬೆಳೆಸಬೇಕು ಎಂದರು.
ಸಭೆಯಲ್ಲಿ ಶಿಕ್ಷಣ ತಜ್ಞ ವಿನಾಯಕ ಜೋಶಿ, ಪಾಟೀಲ ಟ್ಯೂಶನ್ ಕ್ಲಾಸಸ್ ಪ್ರಾಚಾರ್ಯ ಬಸವರಾಜ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಕೆ.ಪಿ, ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎಸ್.ಎಸ್. ಕೆಳದಿಮಠ, ಡೈಟ್‌ನ ಪ್ರಾಚಾರ್ಯೆ ಜಯಶ್ರೀ ಕಾರೇಕರ, ಜಿಲ್ಲಾ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಭೀಮಪ್ಪ. ಎಂ.ಎನ್., ಎಸ್.ಎಸ್.ಎಲ್.ಸಿ ಜಿಲ್ಲಾ ಕೊರ್ಡಿನೆಟರ್ ರವಿಕುಮಾರ ಬಾರಾಟಕ್ಕೆ, ಡಯಟ್‌ನ ಹಿರಿಯ ಉಪನ್ಯಾಸಕ ಎ.ಎ. ಖಾಜಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಎಪಿಸಿಓ ಎಸ್.ಎನ್. ಕಳಸಣ್ಣವರ ಭಾಗವಹಿಸಿ ಸಲಹೆ-ಸೂಚನೆ ನೀಡಿದರು.