ಹುಬ್ಬಳ್ಳಿ: ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ನಿವಾಸಿಗಳಾದ ಕಿಶನ್ ಖಾನವಾಲೆ (30) ಹಾಗೂ ಕಿರಣ ಖಡವಾಕರ್ (32) ಎಂದು ಗುರುತಿಸಲಾಗಿದೆ.
ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಯರಿಕೊಪ್ಪ ಸಮೀಪ ಮಿಶ್ರಾಪೇಡಾ ಮುಂಭಾಗ ಸ್ಕೂಟಿ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರರು ಲಾರಿಯ ಚಕ್ರದಡಿ ಸಿಲುಕಿದ್ದು, ಪರಿಣಾಮ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಬಿದ್ದಿದ್ದವು.
ಘಟನೆಯ ನಂತರ ಸ್ಥಳೀಯರು ತಕ್ಷಣವೇ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ತೆರವುಗೊಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



