ಧಾರವಾಡ: ಊಟದ ಬಿಲ್ ಕೇಳಿದ ಮಾಜಿ ಸೈನಿಕನ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಪ್ತಾಪೂರ ಬಡಾವಣೆಯ ವಿವೇಕಾನಂದ ಸರ್ಕಲ್ ನಲ್ಲಿ ನಿನ್ನೆ ರಾತ್ರಿ ನಡೆದಿದೆ. ರಾಮಪ್ಪ ನಿಪ್ಪಾಣಿ ಹಲ್ಲೆಗೊಳಗಾದ ಮಾಜಿ ಸೈನಿಕನಾಗಿದ್ದು, ದೇಶ ಸೇವೆ ಮಾಡಿ ನಿವೃತ್ತಿಯಾದ ನಂತರ ಧಾರವಾಡದ ಸಪ್ತಾಪುರ ಬಾವಿ ಬಳಿ ಪಿಜಿ ಮತ್ತು ಮೆಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು.
ಕಡಿಮೆ ದರಕ್ಕೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಊಟಕ್ಕೆ ಬರುತ್ತಿದ್ದರು. ಆದರೆ ಕಳೆದ ರಾತ್ರಿ ಸೈನಿಕನ ಮೆಸ್‌ಗೆ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಊಟ ಮಾಡಿ ಬಿಲ್ ಪಾವತಿಸದೇ ಹೋದ ಕಾರಣಕ್ಕೆ ವಾಗ್ವಾದ ಉಂಟಾಯಿತು. ಬಿಲ್ ಕೇಳಿದ ವೇಳೆ ಪೊಲೀಸರು ಅಸಮಾಧಾನಗೊಂಡು, ಅಂಗಡಿ ತಡವಾಗಿ ಮುಚ್ಚುತ್ತಿದ್ದೀಯ ಎಂದು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಯಲ್ಲಿ ಒಬ್ಬ ಎಎಸ್‌ಐ ಸುಬೇದಾರ ಹಾಗೂ ನಾಲ್ವರು ಪೇದೆಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಹೆಲ್ಮೆಟ್ ಮತ್ತು ಲಾಠಿಗಳಿಂದ ರಾಮಪ್ಪ ನಿಪ್ಪಾಣಿಯ ಮೇಲೆ ಹಲ್ಲೆ ನಡೆಸಿ, ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂಬ ದೂರು ದಾಖಲಾಗಿದೆ. ರಾಮಪ್ಪಗೆ ಥಳಿಸಿದ್ದಲ್ಲದೇ, ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ಕೂಡಾ ಥಳಿಸಿದ್ದಾರೆ. ಮೆಸ್‌ನಲ್ಲಿನ ಟೇಬಲ್, ಕುರ್ಚಿಗಳನ್ನು ಮುರಿದು, ನಂತರ ಸಿಸಿಟಿವಿ ಫುಟೇಜ್, ಮೊಬೈಲ್ ಗಳನ್ನು ತಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಘಟನೆ ಧಾರವಾಡ ನಗರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ದುರ್ನಡತೆಯನ್ನು ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಊಟ ಮಾಡಿ ಬಿಲ್ ಪಾವತಿಸದೆ ಗಲಾಟೆ ಮಾಡಿದ ಪ್ರಕರಣದಲ್ಲಿ ಕಾನೂನು ರಕ್ಷಕರು ತಾವೇ ಕಾನೂನು ಉಲ್ಲಂಘಿಸಿರುವುದಕ್ಕೆ ನಾಗರಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಸಂಬಂಧ ತನಿಖೆ ಆರಂಭವಾಗಿದ್ದು, ಅಧಿಕಾರಿಗಳು ಸತ್ಯಾಂಶ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.



