ವಿಜಯಸಾಕ್ಷಿ ಸುದ್ದಿ, ಧಾರವಾಡ/ಬೆಂಗಳೂರು: ಸಾರಿಗೆ ಜಾರಿ ಕ್ಷೇತ್ರದಲ್ಲಿ ಕಠಿಣ ನಿಯಮ ಪಾಲನೆ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಯ ಮೂಲಕ ರಾಜ್ಯಕ್ಕೆ ಮಾದರಿಯಾದ ಸೇವೆ ಸಲ್ಲಿಸಿದ ಧಾರವಾಡ ಜಿಲ್ಲೆಯ ಹಿರಿಯ IMV ಅಧಿಕಾರಿ ಬಾಲಚಂದ್ರ ತೊದಲಬಾಗಿ ಅವರು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಆಲ್ ಇಂಡಿಯಾ ಫೆಡರೇಶನ್ ಆಫ್ ಮೋಟರ್ ವಾಹನ ಇಲಾಖೆ ತಾಂತ್ರಿಕ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವತಿಯಿಂದ ನೀಡುವ ಪ್ರತಿಷ್ಠಿತ “ರಾಷ್ಟ್ರೀಯ ಸಾರಿಗೆ ಜಾರಿಗೆ ಅತ್ಯುತ್ತಮತೆ ಪ್ರಶಸ್ತಿ – 2026” ಅವರಿಗೆ ಲಭಿಸಿದೆ. ಸಾರಿಗೆ ನಿಯಮ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಪರಿಣಾಮಕಾರಿ ಜಾರಿ ಕಾರ್ಯ ಹಾಗೂ ದಾಖಲೆಯ ಮಟ್ಟದಲ್ಲಿ ದಂಡ ಸಂಗ್ರಹ (ಚಲನ್) ಮತ್ತು ಆದಾಯ ಹೆಚ್ಚಳಕ್ಕೆ ಕಾರಣವಾದ ಸಾಧನೆ ಈ ಗೌರವಕ್ಕೆ ಕಾರಣವಾಗಿದೆ.
ಮಾದರಿಯಾದ ಸೇವೆಗೆ ರಾಷ್ಟ್ರೀಯ ಮನ್ನಣೆ
ಬಾಲಚಂದ್ರ ತೊದಲಬಾಗಿ ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನಿಷ್ಠೆ, ಸಮರ್ಪಣೆ ಹಾಗೂ ಪ್ರಾಮಾಣಿಕತೆಯಿಂದ ಸಾರಿಗೆ ಜಾರಿ ಕ್ಷೇತ್ರದಲ್ಲಿ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಪಾಲನೆಗೆ ಒತ್ತು ನೀಡಿದ ಅವರ ಕಾರ್ಯಪದ್ಧತಿ ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಬೆಂಗಳೂರಿನಲ್ಲಿ ಭವ್ಯ ಸಮಾರಂಭ
ಎಪ್ರಿಲ್ 10, 2026 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
“ಕರ್ತವ್ಯವೇ ನನ್ನ ಮೊದಲ ಆದ್ಯತೆ”
“ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಜನರ ಜೀವ ರಕ್ಷಣೆಗಾಗಿ ಅತ್ಯಂತ ಮುಖ್ಯ. ಈ ಪ್ರಶಸ್ತಿ ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ” ಎಂದು ಬಾಲಚಂದ್ರ ತೊದಲಬಾಗಿ ಪ್ರತಿಕ್ರಿಯಿಸಿದರು.
ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಗಣ್ಯರು ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



