HomeGadag Newsಪ್ರೇಕ್ಷಕರನ್ನು ಸೆಳೆದ `ಧೀರ ಶ್ರೀರಾಘವೇಂದ್ರ ವೃತಿವರ’

ಪ್ರೇಕ್ಷಕರನ್ನು ಸೆಳೆದ `ಧೀರ ಶ್ರೀರಾಘವೇಂದ್ರ ವೃತಿವರ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗುರುಸಾರ್ವಭೌಮ, ಕಲಿಯುಗದ ಕಾಮಧೇನು, ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಪೊರೆವ ಶ್ರೀರಾಘವೇಂದ್ರ ಮಹಾಸ್ವಾಮಿಗಳು ವೃಂದಾವನಸ್ಥರಾಗುವ ಮೊದಲಿನ ಹಾಗೂ ವೃಂದಾವನಸ್ಥರಾದ ಮೇಲಿನ ಕೆಲವು ಸನ್ನಿವೇಶಗಳೊಳಗೊಂಡ ನಾಟಕ `ಧೀರ ಶ್ರೀರಾಘವೇಂದ್ರ ವೃತಿವರ’ ಯಶಸ್ವಿಯಾಗಿ ಪ್ರಯೋಗಗೊಂಡಿತು.

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯ ಆಶ್ರಯದಲ್ಲಿ, ಗದಗ ನಗರದ ಕಳಸಾಪೂರ ರಸ್ತೆಯಲ್ಲಿ ನಿರ್ಮಾಣವಾಗಿರುವ ಶಾಖಾ ಮಠದ ಶ್ರೀರಾಘವೇಂದ್ರ ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಅಂಗವಾಗಿ ಗದುಗಿನ ಶ್ರೀರಾಘವೇಂದ್ರ ಕಲಾ ಬಳಗದವರಿಂದ ಈಗಿನ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ನಾಟಕ ಪ್ರಯೋಗಿಸಲ್ಪಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀರಾಘವೇಂದ್ರ ಕಲಾ ಬಳಗ ಗುರುರಾಘವೇಂದ್ರ ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಅಂಗವಾಗಿ ಅಭಿನಯಿಸಿದ `ಧೀರ ಶ್ರೀರಾಘವೇಂದ್ರ ವೃತಿವರ’ ನಾಟಕವನ್ನು ಮಂತ್ರಾಲಯದ ಈಗಿನ ಪೀಠಾಧಿಪತಿಗಳಾದ ಶ್ರೀಸುಭುಧೇಂದ್ರ ಶ್ರೀಪಾದಂಗಳವರು ವೀಕ್ಷಿಸಿದ್ದು ವಿಶೇಷವಾಗಿತ್ತು. ನಾಟಕ ವೀಕ್ಷಿಸಿ ಮೆಚ್ಚುಗೆ ದಯಪಾಲಿಸಿದ ಶ್ರೀಗಳು, ಈ ನಾಟಕ ಮಂತ್ರಾಲಯ ಸನ್ನಿಧಾನದಲ್ಲಿ ಒಮ್ಮೆ ಪ್ರದರ್ಶನವಾಗಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿ ಆಶೀರ್ವದಿಸಿದರು.

ಶ್ರೀ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರ ಸಮರ್ಥ ನಿರ್ದೇಶನದೊಂದಿಗೆ, ಸತ್ವಯುತ ಸಂಭಾಷಣೆಗಳೊಂದಿಗೆ ಸುಂದರವಾಗಿ ಹೆಣೆದ ಸನ್ನಿವೇಶಗಳ ಕಥಾ ಹಂದರ ಸೊಗಸಾಗಿ ಮೂಡಿಬಂದಿತು. ರಂಗನಟ ಮೌನೇಶ ಚಿ.ಬಡಿಗೇರ(ನರೇಗಲ್ಲ) ಅವರು ಶ್ರೀಗುರು ರಾಘವೇಂದ್ರ ಮಹಾಸ್ವಾಮಿಗಳ ಪಾತ್ರದಲ್ಲಿ ತದ್ರೂಪದಂತೆ ಕಂಡುಬರುವುದರೊಂದಿಗೆ ಪ್ರತಿ ಸನ್ನಿವೇಶದಲ್ಲಿ ಪ್ರೇಕ್ಷಕರನ್ನು ಮಂತ್ರಮಗ್ನರನ್ನಾಗಿಸಿ ಮನೋಜ್ಞವಾಗಿ ಅಭಿನಯಿಸಿದ್ದು, ನೈಜ ಸನ್ನಿವೇಶ ಕಣ್ಣಮುಂದೆ ಕಟ್ಟುವಂತಿತ್ತು.

ಪ್ರತಿ ಸಂಭಾಷಣೆಗೂ ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆ ಸಹಜವಾಗಿತ್ತು. ರಾಯರಾಗಿ ಅಭಿನಯಿಸಿದ ಮೌನೇಶ ಬಡಿಗೇರ ಅವರ ಸನ್ನಿವೇಶಗಳಲ್ಲಿ ವೆಂಕಣ್ಣನಾಗಿ ಸುರಭಿ ಮಹಾಶಬ್ದೆ, ನವಾಬನಾಗಿ ಶರಾವತಿ ಸುತಾರ, ಕೃಷ್ಣನಾಗಿ ವಾಣಿಶ್ರೀ ನಾಡಿಗೇರ ಹಾಗೂ ಮಂಚಾಲಮ್ಮನಾಗಿ ಅಂಕಿತಾ ಬೊಮ್ಮಣಗಿ, ಯೋಗೇಂದ್ರರಾಗಿ ಸನತ್ ದೀಪಾಲಿ ಮನಮುಟ್ಟುವಂತೆ ಅಭಿನಯಿಸಿದರು.

ರಾಯರ ಅಂತರಂಗದ ಶಿಷ್ಯರಾದ ಅಪ್ಪಣ್ಣಾಚಾರ್ಯರ ಪಾತ್ರದಲ್ಲಿ ಹಿರಿಯ ರಂಗಕಲಾವಿದರಾದ ಮುರಲೀಧರ ಸಂಕನೂರ ಗಮನ ಸೆಳೆದರು.

ಹಿರಿಯ ರಂಗಕಲಾವಿದರು ಹಾಗೂ ಸಾಹಿತಿಗಳಾದ ಅಂದಾನೆಪ್ಪ ವಿಭೂತಿ ಅವರು ವಿಜಯದಾಸರಾಗಿ ಪಾತ್ರಕ್ಕೆ ಕಳೆಕಟ್ಟಿದರು. ಉಜ್ವಲ್ ಕಬಾಡಿ ಮೇಜರ್ ಮನ್ರೊ, ಶರದ್ಧಾ ಕಬಾಡಿ ಸಹಾಯಕ, ಶ್ವೇತಾ ಸುರೇಬಾನ ಭಾಗಣ್ಣನಾಗಿ, ಮೇಘಾ ಗಡಿಸಾಗರ ಜಗನ್ನಾಥದಾಸರಾಗಿ, ಸಂಜನಾ ದೀಪಾಲಿ ಪ್ರಾಣೇಶದಾಸರಾಗಿ, ಮಹೇಶ ಸಂದಿಗೂಡು ವಾದೀಂದ್ರರಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ಹಿರಿಯ ಪ್ರಸಾಧನ ಕಲಾವಿದ ರಂಗಪ್ಪ ಹುಯಿಲಗೋಳ ಅವರ ಪುತ್ರ ಗಣೇಶ ಹುಯಿಲಗೋಳ ಅವರ ಹಾಗೂ ಶ್ರೀನಿವಾಸ ಹಡಪದ ಅವರ ಪ್ರಸಾಧನ ಎಲ್ಲರ ಗಮನ ಸೆಳೆಯಿತು.

ವಿಷೇಶವಾಗಿ ರಾಯರ ಪರಮ ಭಕ್ತರಾದ ಶ್ರೀನಿವಾಸ ಹುಬ್ಬಳ್ಳಿ, ಕಿರಟಗೇರಿಯ ಕಲ್ಮೇಶಯ್ಯ ಹಿರೇಮಠ ಅವರ ಸಹಕಾರ ಹಾಗೂ ನಾಟಕ ಪ್ರಯೋಗಕ್ಕೆ ಆಹ್ವಾನ ನೀಡಿದ ಮುಖಂಡರಾದ ಗುರುರಾಜ ಹೆಬಸೂರ ಅವರ ಸಹಕಾರಕ್ಕೆ ಕಲಾಬಳಗ ಅಭಿನಂದಿಸಿದೆ.

ವಿಶ್ವನಾಥ ಬೇಂದ್ರೆ ಸ್ವಾಮಿರಾಯನಾಗಿ ಹಾಗೂ ಅನ್ವಿತಾ ಹುಯಿಲಗೋಳ ಪಿಶಾಚಿಯಾಗಿ ಅಭಿನಯಿಸಿದ ಸನ್ನಿವೇಶ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ, ಚಪ್ಪಾಳೆಗಳನ್ನು ಗಿಟ್ಟಿಸಿತು. ಅಪ್ಪಾವರ ಪಾತ್ರದಲ್ಲಿ ರಾಘವೇಂದ್ರ ಮುಜಮದಾರ ಮತ್ತು ಆನಂದದಾಸರ ಪಾತ್ರ ನಿರ್ವಹಿಸಿದ ಶುಭಾಂಗಿ ದ್ಯಾಮೇನಹಳ್ಳಿ ಅವರ ಸನ್ನಿವೇಶ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿತು.

ರಚನೆ ನಿರ್ದೇಶನದೊಂದಿಗೆ ಬೆಳಕು, ಧ್ವನಿ ಹಾಗೂ ಹಿನ್ನೆಲೆ ಸಂಗೀತ ಮತ್ತು ದೃಶ್ಯಗಳಿಗೆ ತಕ್ಕಂತೆ ಭಕ್ತಿಗೀತೆಗಳ ಸಂಯೋಜನೆ ಕೂಡಾ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಅವರದಾಗಿತ್ತು. ಪ್ರತಿ ಸನ್ನಿವೇಶದಲ್ಲಿ ಹಿನ್ನೆಲೆ ಹಾಡುಗಳು ಪ್ರೇಕ್ಷಕರನ್ನು ತಲೆದೂಗುವಂತೆ ಮಾಡಿದ್ದು ನಾಟಕದ ಜೀವಾಳವಾಗಿತ್ತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!