ವಿಜಯಸಾಕ್ಷಿ ಸುದ್ದಿ, ನರೇಗಲ್ : ಜುಲೈ 31ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ ರೋಟರಿ ಭವನದಲ್ಲಿ ಕೃಷಿ ಇಲಾಖೆಯಿಂದ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ನರೇಗಲ್, ರೋಣ ಮತ್ತು ಹೊಳೆ ಆಲೂರ ಹೋಬಳಿಯ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ-2 ಬಿ.ಆರ್. ಪಾಲಾಕ್ಷಗೌಡ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಸಂವಾದ ಕಾರ್ಯಕ್ರಮವನ್ನು ಶಾಸಕ ಮತ್ತು ಕರ್ನಾಟಕ ರಾಜ್ಯದ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಉದ್ಘಾಟಿಸಲಿದ್ದು, ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ಎಲ್. ಪಾಟೀಲರ ಘನ ಉಪಸ್ಥಿತಿಯಲ್ಲಿ ಜರುಗಲಿದೆ. ಅಧ್ಯಕ್ಷತೆಯನ್ನು ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ವಹಿಸಲಿದ್ದಾರೆ. ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ, ವಿಜಯಪುರದ ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ, ಜಂಟಿ ಕೃಷಿ ನಿರ್ದೇಶಕಿ ಜಿ.ಎಚ್. ತಾರಾಮಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಜಕ್ಕಲಿಯ ಪ್ರಗತಿಪರ ರೈತರಾದ ಮಲ್ಲಣ್ಣ ಮೇಟಿ, ಹಾಲಕೆರೆಯ ಗಿರೀಶಗೌಡ ಪಾಟೀಲ, ನಿಡಗುಂದಿಯ ಶಿವಣ್ಣ ಸೂಡಿ ಉಪಸ್ಥಿತರಿರುವರೆಂದು ಪಾಲಾಕ್ಷಗೌಡ ತಿಳಿಸಿದರು.
ಸಂವಾದದಲ್ಲಿನ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾಧ್ಯಾಪಕ ಡಾ. ಸಿ.ಆರ್. ಪಾಟೀಲ, ಡಾ. ಬಿ.ಎನ್. ಮೊಟಗಿ, ಡಾ. ಸಂಗಶೆಟ್ಟಿ ಜಿ.ಭಾಲ್ಕುಂದೆ, ಡಾ. ವಿನಾಯಕ ನಿರಂಜನ, ಶಿವಲಿಂಗಪ್ಪ ಹೊಟ್ಕರ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ರೈತರಿಗೆ ಸಾಂಕೇತಿಕವಾಗಿ ಸೂರ್ಯಕಾಂತಿ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು.
ರೈತರಿಗೆ ತುಂತುರು ನೀರಾವರಿ ಯೋಜನೆಯಡಿ ರಿಯಾಯಿತಿ ದರದಲ್ಲಿ ಸ್ಪ್ರಿಂಕ್ಲರ್ ಗಳನ್ನು ವಿತರಣೆ ಮಾಡಲಿದ್ದು, 63. ಎಂ.ಎಂ. ಮತ್ತು 75 ಎಂ.ಎಂನ ಸ್ಪ್ರಿಂಕ್ಲರ್ ಗಳ ಹಂಚಿಕೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಗುವುದು ಎಂದು ತಿಳಿಸಿದರು.
63 ಎಂ.ಎಂನ ಸ್ಪ್ರಿಂಕ್ಲರ್ ನ ಬೆಲೆ 23,568 ರೂಗಳಾಗಿದ್ದು, ಶೇ. 90ರಷ್ಟು ರಿಯಾಯಿತಿ ದರದಲ್ಲಿ ಅದನ್ನು ಎಲ್ಲ ರೈತರಿಗೆ ನೀಡಲಾಗುತ್ತಿದೆ. ಅಂದರೆ ರೈತರು 4139ರೂ.ಗಳನ್ನು ಪಾವತಿ ಮಾಡಬೇಕು. ಹಾಗೆಯೆ 75 ಎಂ.ಎಂನ ಸ್ಪ್ರಿಂಕ್ಲರ್ ನ ಬೆಲೆ 26,442 ರೂ.ಗಳಾಗಿದ್ದು, ರೈತರು 4667 ರೂ.ಗಳನ್ನು ಪಾವತಿ ಮಾಡಬೇಕು. ಹೋಬಳಿ ಮಟ್ಟದಲ್ಲಿ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಿನ ರೈತರು ಪಾಲ್ಗೊಂಡು ಸಂವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ, ಜಗದೀಶ ಸಂಕನಗೌಡ್ರ, ಅಲ್ಲಾಭಕ್ಷಿ ನದಾಫ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿ.ಕೆ. ಕಮ್ಮಾರ, ಬಾಬು ರಾಜೂರ ಉಪಸ್ಥಿತರಿದ್ದರು.
63 ಎಂ.ಎಂನ ಸ್ಪ್ರಿಂಕ್ಲರ್ ನ ಬೆಲೆ 23,568 ರೂಗಳಾಗಿದ್ದು, ಶೇ. 90ರಷ್ಟು ರಿಯಾಯಿತಿ ದರದಲ್ಲಿ ಅದನ್ನು ಎಲ್ಲ ರೈತರಿಗೆ ನೀಡಲಾಗುತ್ತಿದೆ. ಅಂದರೆ ರೈತರು 4139ರೂ.ಗಳನ್ನು ಪಾವತಿ ಮಾಡಬೇಕು. ಹಾಗೆಯೆ 75 ಎಂ.ಎಂನ ಸ್ಪ್ರಿಂಕ್ಲರ್ ನ ಬೆಲೆ 26,442 ರೂ.ಗಳಾಗಿದ್ದು, ರೈತರು 4667 ರೂ.ಗಳನ್ನು ಪಾವತಿ ಮಾಡಬೇಕು. ಹೋಬಳಿ ಮಟ್ಟದಲ್ಲಿ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಿನ ರೈತರು ಪಾಲ್ಗೊಂಡು ಸಂವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಿ.ಆರ್. ಪಾಲಾಕ್ಷಗೌಡ ವಿನಂತಿಸಿದರು.