ರಾಮನಗರ: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಭಾರಿ ರಾಜಕೀಯ ಸಂಚು ಇರುವ ಸಾಧ್ಯತೆ ಇದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಯ್ ಅವರು ತಾವೇ ಗುಂಡು ಹೊಡೆದುಕೊಂಡರೋ ಅಥವಾ ಯಾರಾದರೂ ಗುಂಡು ಹೊಡೆದ್ರೋ ಎಂಬ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಅವರು, ಘಟನಾ ಸ್ಥಳದಲ್ಲಿ ಸಿಸಿಟಿವಿ ವ್ಯವಸ್ಥೆಯೇ ಇರಲಿಲ್ಲ. ಸ್ಥಳದಲ್ಲಿ ಇದ್ದವರು ಕೇವಲ ಐಟಿ ಅಧಿಕಾರಿಗಳು ಮಾತ್ರ. ಒಳಗಡೆ ಏನಾಯ್ತು ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರು ಚುನಾವಣೆಗೆ ನೂರಾರು ಕೋಟಿ ರೂಪಾಯಿ ಹಣ ಕೇಳಿದ್ದಾರೆ. ಹಣ ಕೊಡದ ಕಾರಣ ರಾಯ್ ಅವರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ಮೂಲಕ ಕಿರುಕುಳ ನೀಡಲಾಗಿದೆ ಎಂಬುದು ನನ್ನ ಬಳಿ ಇರುವ ಪ್ರಾಥಮಿಕ ಮಾಹಿತಿ ಎಂದು ಪ್ರದೀಪ್ ಈಶ್ವರ್ ಆರೋಪಿಸಿದರು.
ಸಿಜೆ ರಾಯ್ ಒಬ್ಬ ಕಾಮನ್ ಮ್ಯಾನ್ ಅಲ್ಲ. ಅವರಿಗೆ ಸಾಲವೂ ಇರಲಿಲ್ಲ, ಯಾವುದೇ ವೈಯಕ್ತಿಕ ಸಮಸ್ಯೆಯೂ ಇರಲಿಲ್ಲ. ಆದರೂ ಕಳೆದ ಒಂದು ತಿಂಗಳಿನಿಂದ ಐಟಿ ಅಧಿಕಾರಿಗಳಿಂದ ನಿರಂತರ ಕಿರುಕುಳ ಅನುಭವಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಇಂತಹ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಅವರು ಕಿಡಿಕಾರಿದರು.
ಸಿಬಿಐಗೆ ತನಿಖೆ ನೀಡಿದರೆ ನ್ಯಾಯ ಸಿಗುವುದಿಲ್ಲ. ಸಿಬಿಐ ಕೂಡ ಬಿಜೆಪಿ ಕೈಯಲ್ಲೇ ಇದೆ ಎಂದು ಆರೋಪಿಸಿದ ಅವರು, ಸ್ವತಂತ್ರ ಎಸ್‌ಐಟಿ ತನಿಖೆ ನಡೆಸಬೇಕು. ನಿಜಾಂಶ ಹೊರಬರಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.



