ತುಮಕೂರು: ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗುವ ಘಟನೆಗಳು ಸಾಮಾನ್ಯವಾಗಿರುವ ನಡುವೆ, ತುಮಕೂರು ಜಿಲ್ಲೆಯಲ್ಲಿ ಇದಕ್ಕೆ ವಿರುದ್ಧವಾದ ಪ್ರಕರಣ ಬೆಳಕಿಗೆ ಬಂದಿದೆ. ಸೊಸೆ ಕಾಟಕ್ಕೆ ಬೇಸೆತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60) ಶವ ಪತ್ತೆಯಾಗಿದೆ. ಶವ ಫಾರ್ಮ್‌ಹೌಸ್‌ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ಪಂಪ್‌ಹೌಸ್‌ನಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸುತ್ತಿದ್ದಳು ಎನ್ನಲಾಗಿದೆ.
ಇದೇ ಕಾರಣಕ್ಕೆ ಅಡುಗೆ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ವಿಚಾರವನ್ನೂ ಚರ್ಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಮಗನನ್ನು ಸೊಸೆ ತನ್ನಿಂದ ದೂರ ಮಾಡಬಹುದು ಎಂಬ ಭಯದಿಂದ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ಬೆಳಗ್ಗೆ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದ ಕಾರಣ ಅನುಮಾನ ಹೆಚ್ಚಾಗಿತ್ತು.
ಪೊಲೀಸರ ಪರಿಶೀಲನೆಯ ಬಳಿಕ ಮಧ್ಯರಾತ್ರಿ 1.45ರ ಸುಮಾರಿಗೆ ಭ್ರಮರಾಂಬಿಕೆ ತಾವೇ ನಡೆದುಕೊಂಡು ಪಂಪ್‌ಹೌಸ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಶವವನ್ನು ಕೆಳಗಿಳಿಸುವ ವೇಳೆ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



