ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, 2024-25ನೇ ಸಾಲಿನ ಜಿ.ನಾರಾಯಣಸ್ವಾಮಿ ಪ್ರಶಸ್ತಿಗೆ (ಅತ್ಯುತ್ತಮ ಗ್ರಾಮಾಂತರ ವರದಿಗೆ) ಲಕ್ಮೇಶ್ವರ ತಾಲೂಕಿನ ಸಂಯುಕ್ತ ಕರ್ನಾಟಕ ವರದಿಗಾರ ದಿಗಂಬರ ಮುರಳೀಧರ ಪೂಜಾರ ಭಾಜನರಾಗಿದ್ದಾರೆ.
ದಿಗಂಬರ ಪೂಜಾರ ಕಳೆದ ಎರಡು ದಶಕಗಳಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ವಾರ ಪತ್ರಿಕೆ, ಪಾಕ್ಷಿಕ, ಮಾಸಿಕ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದ ಅನುಭವ ಹೊಂದಿದ್ದಾರೆ. ಎಂ.ಕಾಂ ಪದವೀಧರರಾದ ಇವರು 19-20 ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ 2023ರಲ್ಲಿ ತಮಿಳುನಾಡಿನಲ್ಲಿ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದಿಂದ ಪತ್ರಿಕಾಸಿರಿ ಎಂಬ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಕೆಯುಡಬ್ಲೂಜೆ ವತಿಯಿಂದ ತುಮಕೂರಿನಲ್ಲಿ ದಿ.18 ಮತ್ತು 19ರಂದು ನಡೆಯುವ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು.



