ಬೆಂಗಳೂರು: ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಕ್ರಮವಹಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಈ ವಿಷಯವನ್ನು ಪ್ರಸ್ತಾಪಿಸಿದರು. ಕಲಬುರಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ನೀಡಲಾಗುತ್ತಿಲ್ಲ.
ಊಟದ ಗುಣಮಟ್ಟವೂ ಸರಿಯಾಗಿಲ್ಲ ಎಂಬ ದೂರುಗಳಿವೆ. ಈ ವ್ಯವಸ್ಥೆಯನ್ನು ಸರಿಪಡಿಸುವ ಜೊತೆಗೆ ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ನಮ್ಮ ಮಾಹಿತಿ ಪ್ರಕಾರ ಮೆನು ಪ್ರಕಾರವೇ ತಿಂಡಿ ಹಾಗೂ ಊಟ ನೀಡಲಾಗುತ್ತಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಆಹಾರ ವ್ಯವಸ್ಥೆ ಮಾಡಲಾಗಿದೆ. ಊಟದ ಗುಣಮಟ್ಟ ಸರಿಯಿಲ್ಲ ಎಂಬ ಕುರಿತು ನನಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಎಲ್ಲಿಯಾದರೂ ಸಮಸ್ಯೆ ಕಂಡುಬಂದರೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು ಎಂದರು.
ಇದೇ ವೇಳೆ ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.



