ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 150 ವರ್ಷಗಳ ಹಿಂದೆ ಜಾತಿ, ಮತ, ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದ ಸಮಾಜದ ಕಣ್ತೆರೆಸಿ ಪ್ರೀತಿ, ವಾತ್ಸಲ್ಯ, ಮಾನವೀಯತೆಗಳನ್ನು ಬಿತ್ತಿ, ಅವರ ಹೃದಯದ ತೋಟವನ್ನು ನಳನಳಿಸುವಂತೆ ಮಾಡಿದ ಇಲ್ಲಿಯ ಸಮೀಪದ ಹರ್ಲಾಪುರ ಗ್ರಾಮದ ಹಠಯೋಗಿ ಸಾಧಕ ಕೊಟ್ಟೂರೇಶ್ವರ ಮಠದಲ್ಲಿ ಬಸವ ಪುರಾಣ ಮಹಾ ಮಂಗಲೋತ್ಸವ, ಧಾರ್ಮಿಕ ಸಮಾರಂಭ ಹಾಗೂ ಭಾವೈಕ್ಯತೆಯ `ನಮ್ಮೂರ ಲಕ್ಷ ದೀಪೋತ್ಸವ’ ಕಾರ್ಯಕ್ರಮವು ವಿಧಿ-ವಿಧಾನಗಳೊಂದಿಗೆ ಡಿ.14 ಮತ್ತು 15ರಂದು ಜರುಗಲಿದೆ.
ಡಿ.14ರಂದು ಬಸವ ಪುರಾಣ ಪ್ರವಚನದ ಮೂಲಕ ಹರ್ಲಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನ ಮನ ಸೆಳೆದ ಬೀದರ ಜಿಲ್ಲೆಯ ಗಡಿಗೌಡಗಾಂವ ಹಾವಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರವಚನವನ್ನು ಮಂಗಲ ಮಾಡುವರು. ಪಾವನ ಸಾನ್ನಿಧ್ಯವನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮಿಗಳು ವಹಿಸುವರು. ಹೊಸಳ್ಳಿಯ ಬೂದೀಶ್ವರ ಶ್ರೀಗಳು, ಚನ್ನವೀರ ಶ್ರೀಗಳು, ಕೊಟ್ಟೂರೇಶ್ವರ ಶಿವಾಚಾರ್ಯರು, ಗವಿಸಿದ್ಧಲಿಂಗ ಶಿವಾಚಾರ್ಯರು, ಶಿವಾನಂದ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ವೀರಯ್ಯ ತಾತನವರು ಹಿರೇಮಠ, ಶಿವಲಿಂಗಶಾಸ್ತಿçಗಳು, ಶಂಕ್ರಯ್ಯ ಅಜ್ಜನವರು ಹಿರೇಮಠ, ಕೊಟ್ರಯ್ಯಶಾಸ್ತ್ರಿಗಳು ನರಗುಂದಮಠ, ಬೆಂಗಳೂರು ಮಿರಾಂಡ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಎನ್. ಕಾತರಕಿ ಕೊಟ್ಟೂರೇಶ್ವರ ಶ್ರೀಗಳು ರಚಿಸಿದ `ವಚನಕಾರರ ದೃಷ್ಟಿಯಲ್ಲಿ ಸಮಾನತೆ ಮತ್ತು ವೈಚಾರಿಕತೆ’ ಗ್ರಂಥವನ್ನು ಬಿಡುಗಡೆ ಮಾಡುವರು.
ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯೆಂದ್ರ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಸಿ.ಸಿ. ಪಾಟೀಲ, ವಿ.ಪ ಸದಸ್ಯ ಎಸ್.ವಿ. ಸಂಕನೂರು, ಮಾಜಿ ಸಚಿವ ಕೆ.ಜಿ. ಬಂಡಿ, ರಾಜು ಕುರಡಗಿ, ರವಿ ದಂಡಿನ, ಶಿವಕುಮಾರಗೌಡ ಪಾಟೀಲ, ಮುತ್ತಣ್ಣ ಕಡಗದ, ಅಶೋಕ ಬ್ಯಾಹಟ್ಟಿ ಸೇರಿದಂತೆ ಹರ, ಗುರು, ಚರ ಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಡಿ.15ರಂದು ಬೆಳಿಗ್ಗೆ ೬ಕ್ಕೆ ಕೊಟ್ಟೂರೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ ಪೂಜೆ, ಮಹಾಪ್ರಸಾದ, ಸಂಜೆ ೪ಕ್ಕೆ ಪೂರ್ಣ ಕುಂಭದೊಂದಿಗೆ ಕೊಟ್ಟೂರೇಶ್ವರ ಹಾಗೂ ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರುಗಲಿದೆ. ನಂತರ ಶ್ರೀಮಠದ ಆಶ್ರಯದಲ್ಲಿ ಗ್ರಾಮದ ಪ್ರತಿ ದೇವಸ್ಥಾನ, ಮಠ, ಮಸೀದಿಗಳಲ್ಲಿ ನಮ್ಮೂರ ಲಕ್ಷ ದೀಪೋತ್ಸವ ಜರುಗಲಿದೆ. ಗ್ರಾಮದ ಪ್ರತಿಯೊಂದು ಮನೆಯ ಭಕ್ತರು ಧರ್ಮ, ಜಾತಿ, ಮತ, ಪಂಥ ತೊರೆದು ದೀಪದಿಂದ ದೀಪ ಹಚ್ಚುವ ಧಾರ್ಮಿಕ ಕಾರ್ಯದಲ್ಲಿ ಭಾಗಿಗಳಾಗಲಿದ್ದಾರೆ.
ರಾತ್ರಿ 9ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.