ಕುಡಿದ ಅಮಲಿನಲ್ಲಿ ನಿರ್ದೇಶಕರೊಬ್ಬರು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿದ್ದು ಸುಮಾರು ಎಂಟು ಜನರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಠಾಕೂರ್ ಪುಕುರ್ ಪ್ರದೇಶದಲ್ಲಿ ನಡೆದಿದೆ.
ಕುಡಿದು ಕಾರು ಚಲಾಯಿಸಿದ ವ್ಯಕ್ತಿಯನ್ನು ದೂರದರ್ಶನ ಮತ್ತು ಚಲನಚಿತ್ರ ನಿರ್ದೇಶಕ ಸಿದ್ಧಾಂತ್ ದಾಸ್ ಎಂದು ಗುರುತಿಸಿಲಾಗಿದೆ. ಈತನ ಜೊತೆಗೆ ಪ್ರಸಿದ್ಧ ಬಂಗಾಳಿ ಚಾನೆಲ್‌ನ ಕಾರ್ಯನಿರ್ವಾಹಕ ನಿರ್ಮಾಪಕರು ಸಹ ಇದ್ದರು ಎನ್ನಲಾಗಿದೆ. ಘಟನೆಯ ಬಳಿಕ ಸ್ಥಳೀಯರು ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಘಟನೆ ಬಳಿಕ ಸಿದ್ಧಾಂತ್ ದಾಸ್ ಅಲಿಯಾಸ್ ವಿಕ್ಟೋನನ್ನು ಠಾಕೂರ್ಪುಕೂರ್ ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಸಿದ್ಧಾಂತ್ ಕಾರನ್ನು ಚಲಾಯಿಸುತ್ತಿದ್ದರು. ಬಂಗಾಳಿ ಚಾನೆಲ್ ಒಂದರ ಕಾರ್ಯನಿರ್ವಾಹಕ ನಿರ್ಮಾಪಕಿ ಶ್ರಿಯಾ ಬಸು ಅವರೊಂದಿಗೆ ಕಾರಿನಲ್ಲಿ ಹಾಜರಿದ್ದರು. ತಮ್ಮ ಸರಣಿಯ ಯಶಸ್ಸನ್ನು ಆಚರಿಸಲು ಇಬ್ಬರು ಕೋಲ್ಕತ್ತಾದ ಸೌತ್ ಸಿಟಿ ಮಾಲ್‌ನಲ್ಲಿ ಮಧ್ಯರಾತ್ರಿಯವರೆಗೆ ಪಾರ್ಟಿ ಮಾಡಿದರು. ಈ ಪಾರ್ಟಿಯಲ್ಲಿ ಸಿದ್ಧಾಂತ್ ದಾಸ್, ಶ್ರಿಯಾ ಬಸು ಕುಡಿದಿದ್ದರು ಎನ್ನಲಾಗಿದೆ.
ಪಾರ್ಟಿ ಬಳಿಕ ಸಿದ್ಧಾಂತ್ ದಾಸ್ ಮತ್ತು ಶ್ರಿಯಾ ಬಸು ಕಾರಿನಲ್ಲಿ ನಗರವನ್ನು ಸುತ್ತಲು ಪ್ರಾರಂಭಿಸಿದರು. ಅವರಿಬ್ಬರೂ ಕುಡಿದ ಮತ್ತಿನಲ್ಲಿ ನಗರದಲ್ಲಿ ಓಡಾಡುತ್ತಿದ್ದರು. ಭಾನುವಾರ ಬೆಳಿಗ್ಗೆ, ಅವರ ಕಾರು ಇದ್ದಕ್ಕಿದ್ದಂತೆ ಠಾಕೂರ್ಪುಕುರ್ ಬಜಾರ್‌ಗೆ ಪ್ರವೇಶಿಸಿ ಅನೇಕ ಜನರಿಗೆ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ಕೋಲ್ಕತ್ತಾ ಪೊಲೀಸರು, “ರಾತ್ರಿ 9:30 ರ ಸುಮಾರಿಗೆ ಠಾಕೂರ್ ಪುಕುರ್ ಬಜಾರ್ ಬಳಿಯ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ ಕಾರು ಹಲವಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಸ್ತೂರಿ ನರ್ಸಿಂಗ್ ಹೋಂ ಮತ್ತು ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕಾರನ್ನು ಮತ್ತು ಚಾಲಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.


