ತಮಿಳು ಚಲನಚಿತ್ರರಂಗದ ದಿಗ್ಗಜರಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಇತ್ತೀಚೆಗಷ್ಟೇ ಘೋಷಿಸಿದ್ದಾರೆ. ಇಬ್ಬರು ಸೂಪರ್ ಸ್ಟಾರ್ ಗಳು ಒಟ್ಟಿಗೆ ಕೆಲಸ ಮಾಡ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಆದರೆ, ಈ ಕನಸಿನ ಸಿನಿಮಾದ ನಿರ್ದೇಶಕನಾಗಿ ಘೋಷಿಸಲ್ಪಟ್ಟಿದ್ದ ಸುಂದರ್ ಸಿ ಅವರು, ಚಿತ್ರ ಆರಂಭಕ್ಕೂ ಮುನ್ನವೇ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ರಜನೀಕಾಂತ್ ಅವರ 173ನೇ ಸಿನಿಮಾ ಎಂದು ಘೋಷಿಸಲ್ಪಟ್ಟ ಈ ಚಿತ್ರವನ್ನು, ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಡಿ ನಿರ್ಮಾಣ ಮಾಡಲಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆದಿತ್ತು. ಆದರೆ, ಕೇವಲ ಒಂದು ವಾರದೊಳಗೆ ನಿರ್ದೇಶಕ ಸುಂದರ್ ಸಿ ತಮ್ಮ ಸ್ಥಾನದಿಂದ ಹೊರಬಂದಿದ್ದಾರೆ.
ತಮ್ಮ ನಿರ್ಗಮನದ ಬಗ್ಗೆ ಸ್ಪಷ್ಟನೆ ನೀಡಿರುವ ಸುಂದರ್ ಸಿ, “ಕೆಲವು ಹೇಳಲಾಗದ, ಆದರೆ ತಪ್ಪಿಸಲಾಗದ ಕಾರಣಗಳಿಂದಾಗಿ ನಾನು ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿಯುತ್ತಿದ್ದೇನೆ. ಇದು ತುಂಬಾ ಭಾರವಾದ ನಿರ್ಧಾರ. ರಜನೀಕಾಂತ್ ಸರ್ ಮತ್ತು ಕಮಲ್ ಹಾಸನ್ ಸರ್ ಇಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಹಾಗೂ ಕ್ಷಮೆ ಎಂದಿದ್ದಾರೆ.
ಮುಂದುವರೆದು ಹೇಳಿದ ಅವರು, “ಇವರಿಬ್ಬರ ಜೊತೆಗಿನ ನನ್ನ ಅನುಬಂಧ ಮುಂದುವರೆಯಲಿದೆ. ಅವರೊಂದಿಗಿನ ಅನುಭವಗಳು ಹಾಗೂ ಕಲಿತ ಪಾಠಗಳು ನನ್ನ ಜೀವನದ ಅಮೂಲ್ಯ ನೆನಪುಗಳಾಗಿವೆ,” ಎಂದಿದ್ದಾರೆ.
ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ, ಸುಂದರ್ ಸಿ ಹಳೆಯ ಶೈಲಿಯ ನಿರ್ದೇಶಕ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೊಸ ಪೀಳಿಗೆಯ ಚಿತ್ರರಚನೆ ಶೈಲಿಗೆ ಅವರು ಹೊಂದಿಕೊಳ್ಳಲಾರರು ಎಂಬ ಟೀಕೆಗಳು ಕೇಳಿಬಂದಿದ್ದವು. ಇದೀಗ, ಅವರ ಪ್ರಾಜೆಕ್ಟ್‌ನಿಂದ ಹೊರಬರುವ ನಿರ್ಧಾರಕ್ಕೆ ಇದೇ ಕಾರಣವಾಗಿರಬಹುದೆಂಬ ಊಹಾಪೋಹಗಳು ನಡೆಯುತ್ತಿವೆ.
ಚಿತ್ರದ ಹೊಸ ನಿರ್ದೇಶಕರ ಆಯ್ಕೆ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ, ರಜನೀಕಾಂತ್ – ಕಮಲ್ ಹಾಸನ್ ಜಂಟಿ ಸಿನಿಮಾ ಎಂಬ ಕಾರಣಕ್ಕೆ ಈ ಪ್ರಾಜೆಕ್ಟ್‌ನತ್ತ ಈಗ ಇಡೀ ತಮಿಳು ಚಿತ್ರರಂಗದ ಕಣ್ಣು ನೆಟ್ಟಿದೆ.


