ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಾರ್ವಜನಿಕ ಅಭಿವೃದ್ಧಿಯ ಹಿತಾಸಕ್ತಿಯಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಶಾಲಾ ಶಿಕ್ಷಣ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಸಮೀಕ್ಷೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಸಮೀಕ್ಷೆದಾರರಿಗೆ ಅಗತ್ಯವಿರುವ ತರಬೇತಿ, ಸಹಕಾರಕ್ಕೆ ಜಿಲ್ಲಾಡಳಿತ ಸಿದ್ಧವಿದೆ. ಆದರೂ ನೆಪ ಹೇಳುವ, ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನತೆ ತೋರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಯಾ ಇಲಾಖೆ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಮೀಕ್ಷೆಯ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಜಿಲ್ಲೆಯ ಎಲ್ಲ ಮೇಲ್ವಿಚಾರಕರ ಹಾಗೂ ನಿಯೋಜಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಸಮೀಕ್ಷೆಯ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸೆ. 22ರಿಂದ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಯಲ್ಲಿ ಆರಂಭಿಕವಾಗಿ ತಾಂತ್ರಿಕ ಸಮಸ್ಯೆಗಳು ಕಂಡುಬಂದರೂ, ತಕ್ಷಣ ಸಂಬಂಧಿಸಿದ ಸಿಬ್ಬಂದಿ ಹಾಗೂ ತಾಂತ್ರಿಕ ಸಮಾಲೋಚಕರು ಪರಿಹರಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆಗಾಗಿ ಹೊಸ 3.5 ಆ್ಯಪ್‌ನ್ನು ಸಹ ಬಿಡುಗಡೆ ಮಾಡಿ, ಪ್ರತಿ ಸಮೀಕ್ಷೆದಾರರು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈಗ ಯಾವುದೇ ರೀತಿಯ ಓಟಿಪಿ ಸಮಸ್ಯೆ ಇಲ್ಲ. ಆದಾಗ್ಯೂ ಇವತ್ತಿನವರೆಗೆ ನಿಗದಿತ ಗುರಿಯ ಪ್ರಕಾರ ಸಮೀಕ್ಷೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಮೇಲ್ವಿಚಾರಕರು ಹಾಗೂ ಸಮೀಕ್ಷೆದಾರರು ಸಮೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಪ್ರತಿ ಮೇಲ್ವಿಚಾರಕರು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಸಮೀಕ್ಷೆದಾರರನ್ನು ಸಂಪರ್ಕಿಸಿ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಮಾರ್ಗದರ್ಶನ ಮಾಡಬೇಕು. ಪ್ರಗತಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸಮೀಕ್ಷೆದಾರರಿಗೆ ಉಂಟಾಗುವ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಅಥವಾ ತಹಸೀಲ್ದಾರ, ತಾಂತ್ರಿಕ ಸಮಾಲೋಚಕರ ನೆರವಿನಿಂದ ಬಗೆಹರಿಸಬೇಕು. ಕಾಲಮಿತಿಯಲ್ಲಿ ಗುರಿ ಸಾಧಿಸಬೇಕೆಂದು ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯಾ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಹಾಗೂ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಿಂದ ತೆರಳುವಂತಿಲ್ಲ, ರಜೆ ಹೋಗುವಂತಿಲ್ಲ. ತೀರಾ ಅನಿವಾರ್ಯ ಸಂದರ್ಭಗಳಿದ್ದಲ್ಲಿ ತಹಸೀಲ್ದಾರರನ್ನು ಸಂಪರ್ಕಿಸಿ ಲಿಖಿತ ಮನವಿ ನೀಡಿ, ಪರ್ಯಾಯವಾಗಿ ಸಮೀಕ್ಷೆದಾರರನ್ನು ನಿಯೋಜಿಸಿ, ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್ ಇದ್ದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಸಮೀಕ್ಷೆದಾರರಿಗೆ ಸಮೀಕ್ಷೆ ಆರಂಭವಾಗುವ ಪೂರ್ವದಲ್ಲಿಯೇ ಮಾಹಿತಿ ನೀಡಿ, ಸಮೀಕ್ಷೆಗೆ ಆದೇಶ ಪತ್ರ ನೀಡಲಾಗಿದೆ. ಪ್ರತಿ ದಿನ ಎಲ್ಲ ಸಮೀಕ್ಷೆದಾರರಿಗೆ ಅವರ ಮೇಲ್ವಿಚಾರಕರ ಮೂಲಕ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ತಮಗೆ ವಹಿಸಿರುವ ಕರ್ತವ್ಯವನ್ನು ನಿಯಮಾನುಸಾರ ನಿರ್ವಹಿಸಬೇಕು ಎಂದು ತಿಳಿಸಿದರು.