ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಭೂ ದಾಖಲೆಗಳ ಕಚೇರಿಗೆ ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ ಗುರುವಾರ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, 15 ದಿನಗಳ ಒಳಗಾಗಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸಾರ್ವಜನಿಕರ ಅಲೆದಾಟ ತಪ್ಪಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

Advertisement

ಬೆಳಿಗ್ಗೆ 11ರ ಸುಮಾರಿಗೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಗಳ ಹಾಜರಿಯನ್ನು ಪರೀಕ್ಷಿಸುತ್ತಿರುವ ಸಮಯದಲ್ಲಿ ಸರ್ವೆ ಸೂಪರ್‌ವೈಸರಗಳು ಫೀಲ್ಡ್ಗೆ ಹೋಗಿರುವುದಾಗಿ ಸಿಬ್ಬಂದಿಗಳು ಹೇಳಿದಾಗ, ಎಲ್ಲರಿಗೂ ಜಿಪಿಎಸ್ ಫೋಟೋ ರವಾನಿಸುವಂತೆ ಸೂಚನೆ ನೀಡಿದರು. ಕೆಲವರು ನೈಜ ಜಿಪಿಎಸ್ ಫೋಟೋ ಕಳುಹಿಸಿದರು. ಕೆಲವರು ಅನಧಿಕೃತ ಗೈರು ಉಳಿದಿರುವದು, ಮೂವ್‌ಮೆಂಟ್ ರಜಿಸ್ಟರ್‌ನಲ್ಲಿ ನಮೂದಿಸದೇ ಇರುವುದು, ನಗದು ಪುಸ್ತಕವನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಕಂಡು ಬಂದಿತು.

ಆಕಾರ್‌ಬಂದ್ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಉದ್ದೇಶಪೂರ್ವಕವಾಗಿ ಪ್ರಕರಣವನ್ನು ಇಟ್ಟುಕೊಂಡರೆ ಅಂತಹವರ ಮಾಹಿತಿಯನ್ನು ಸಹ ತಮಗೆ ನೀಡಬೇಕೆಂದು ಸೂಚಿಸಿದರು. ಶಿರಹಟ್ಟಿ ತಾಲೂಕಿಗೆ ಇರುವ ಎಡಿಎಲ್‌ಆರ್ ವಾರದಲ್ಲಿ 2 ದಿನ ಮಾತ್ರ ಲಭ್ಯವಿರುವುದು ಕಂಡು ಬಂದಿತು. ಆದರೆ ಯಾವ ದಿನ ಇಲ್ಲಿ ಲಭ್ಯ ಇರುತ್ತಾರೆಂಬುದು ಸ್ಪಷ್ಟತೆ ಇಲ್ಲದಿರುವುದರಿಂದ ಡಿಡಿಎಲ್‌ಆರ್ ಕಚೇರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಆದೇಶವನ್ನು ಮಾರ್ಪಡಿಸುವಂತೆ ಸೂಚನೆ ನೀಡಿದರು.

ಭೇಟಿಯ ಸಂದರ್ಭದಲ್ಲಿ ಭೂ ದಾಖಲೆಗಳ ವಿವಿಧ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಸಮಸ್ಯೆಯನ್ನು ಲೋಕಾಯುಕ್ತರ ಮುಂದೆ ತೋಡಿಕೊಂಡರು. ಸಂಬಂಧಿಸಿದ ಸಿಬ್ಬಂದಿಯಿಂದ ಅರ್ಜಿಯನ್ನು ಪರಿಶೀಲಿಸಿ ಅವರ ಅಲೆದಾಟವನ್ನು ತಪ್ಪಿಸಬೇಕೆಂದು ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here