ವಿಜಯಸಾಕ್ಷಿ ಸುದ್ದಿ, ಧಾರವಾಡ : ಲೋಕಸಭೆ ಸಾರ್ವತ್ರಿಕ ಚುನಾವಾಣೆ-೨೦೨೪ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಚುನಾವಣಾ ಕರ್ತವ್ಯ ನಿರ್ವಹಣೆಗೆ ನೋಡಲ್ ಅಧಿಕಾರಿ, ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನಿಯೋಜಿಸಿ, ಆದೇಶಿಸಲಾಗಿದೆ. ಯಾವುದೇ ಅಧಿಕಾರಿ, ಸಿಬ್ಬಂದಿಗಳು ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆ ಅಥವಾ ಗೈರು ಹಾಜರಾಗಬಾರದು.
ಅನುಮತಿ ಪಡೆಯದೆ ಗೈರಾದಲ್ಲಿ ಗಂಭೀರವಾಗಿ ಪರಿಗಣಿಸಿ, ಅಂತವರನ್ನು ಜಿಲ್ಲೆಯಿಂದ ಬಿಡುಗಡೆ ಮಾಡಿ, ಮಾನ್ಯ ಭಾರತ ಚುನಾವಣಾ ಆಯೋಗಕ್ಕೆ ಶಿಸ್ತು ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ಕಾರ್ಯಗಳಿಗೆ ನೂತನವಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳ, ಚುನಾವಣಾ ಅಧಿಕಾರಿ, ಸಿಬ್ಬಂದಿಗಳ ಸಭೆ ಜರುಗಿಸಿ ಮಾತನಾಡಿದರು.
ಲೋಕಸಭೆಯ ಧಾರವಾಡ ಮತಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ, ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ಸಂಬಂಧಿತ ಎಲ್ಲ ಕಾರ್ಯಗಳನ್ನು ಸುಗಮವಾಗಿ, ಕಾಲಮಿತಿಯಲ್ಲಿ ನಡೆಸಲು ವಿವಿಧ ವಿಭಾಗಗಳಿಗೆ ಜಿಲ್ಲೆಯ ೨೧ ಜನ ಹಿರಿಯ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.
ನೊಡಲ್ ಅಧಿಕಾರಿಗೆ ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅವರ ತಂಡದ ಸದಸ್ಯರನ್ನಾಗಿ ನೇಮಿಸಿದೆ. ಪ್ರತಿ ನೋಡಲ್ ಅಧಿಕಾರಿ ತನ್ನ ವಿಭಾಗದ ಕಾರ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ನೀಡಿ, ತನ್ನ ತಂಡವನ್ನು ಸುಸಜ್ಜಿತಗೊಳಿಸುವುದು ಅವರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಅಧಿಕಾರಿ ತನಗೆ ನಿಯೋಜಿಸಿದ ಚುನಾವಣಾ ಕಾರ್ಯಗಳ ಬಗ್ಗೆ, ಅದಕ್ಕೆ ಅನ್ವಯಿಸುವ ಸೆಕ್ಷನ್, ಕಾನೂನು, ಐಪಿಸಿ ತಿಳಿದಿರಬೇಕು. ತನ್ನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅಧಿಕಾರಿಗಳಿಗೆ ನಿಯಮಾನುಸಾರ ಮತ್ತು ಅಧಿಕಾರಯುತವಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ದಂಡಾಧಿಕಾರಿ ಅಧಿಕಾರ ಕೊಟ್ಟರೂ, ಅವರು ಸರಿಯಾಗಿ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ರಾಜೀವ ಎಂ. ಮಾತನಾಡಿದರು. ಎಲ್ಲ ನೋಡಲ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಸೀಲ್ದಾರ, ಶಿರಸ್ತೆದಾರರು, ವಿಷಯ ನಿರ್ವಾಹಕರು ಸಭೆಯಲ್ಲಿ ಭಾಗವಹಿಸಿದ್ದರು.
ಚುನಾವಣಾ ಸಹಾಯವಾಣಿ, ಕಂಟ್ರೋಲ್ ರೂಂ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಯಾವುದೇ ಚುನಾವಣಾ ಸಿಬ್ಬಂದಿ ಪೂರ್ವಾನುಮತಿ ಪಡೆಯದೇ ರಜೆ ಹೋಗುವುದಾಗಲಿ ಅಥವಾ ಗೈರು ಹಾಜರಾಗುವುದಾಗಲಿ ಮಾಡುವಂತಿಲ್ಲ. ಈ ಬಗ್ಗೆ ಆಯಾ ನೋಡಲ್ ಅಧಿಕಾರಿಗಳು ನಿಗಾವಹಿಸಬೇಕು.
ಕರ್ತವ್ಯದಲ್ಲಿ ಉದಾಸೀನತೆ ತೋರುವ, ನಿಯಮ ಮೀರುವ ಸಿಬ್ಬಂದಿ, ಅಧಿಕಾರಿಗಳಿಗೆ ಆಯಾ ನೋಡಲ್ ಅಧಿಕಾರಿಗಳು ನೋಟಿಸ್ ನೀಡಿ, ಅವರ ಮೇಲೆ ಕ್ರಮ ಕೈಗೊಳ್ಳಲು ತಮ್ಮ ವರದಿಯೊಂದಿಗೆ ಶಿಸ್ತುಕ್ರಮಕ್ಕಾಗಿ ಜಿಲ್ಲಾ ಚುನಾವಣಾ ಆಯೋಗಕ್ಕೆ ಶಿಪಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.