ವಿಜಯಸಾಕ್ಷಿ ಸುದ್ದಿ, ಗದಗ: ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗಿದ್ದು, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂವರ್ಧನೆಗೆ ವರದಾನವಾಗಿವೆ. ಎಲ್ಲಕ್ಕೂ ಮುಖ್ಯವಾಗಿ ಕ್ರೀಡೆಗಳಿಂದ ಶಿಸ್ತು-ಸಹಕಾರ ಮನೋಭಾವ ಬೆಳೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ನುಡಿದರು.
ಅವರು ಇಲ್ಲಿನ ಕೆ.ಎಚ್. ಪಾಟೀಲ್ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಗದಗ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪ.ಪೂ ಮಹಾವಿದ್ಯಾಲಯಗಳ ನೌಕರರ ಸಂಘ, ರಾಜ್ಯ ಪ.ಪೂ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಫ್ಲೋರ್‌ಬಾಲ್ ಪಂದ್ಯಾವ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ವಿದ್ಯಾರ್ಥಿಗಳಿಗೆ ಸೂಕ್ತ ಕ್ರೀಡಾ ತರಬೇತಿ ಹಾಗೂ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಪ.ಪೂ ಕಾಲೇಜುಗಳಿಗೆ ದೈಹಿಕ ಉಪನ್ಯಾಸಕರ ನೇಮಕಾತಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಓಲಂಪಿಕ್ಸ್ ನಂತ ಪ್ರತಿಷ್ಠಿತ ಕ್ರೀಡೆಗಳಲ್ಲಿ ಭಾರತೀಯರ ಪ್ರದರ್ಶನ ಇನ್ನಷ್ಟು ಉತ್ತಮವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ ಅವರು, ಕ್ರೀಡಾ ನಿರ್ಣಾಯಕರಿಗೆ ತಾವೇ ಕೊಡಮಾಡಿದ ಸಮವಸ್ತçಗಳನ್ನು ವಿತರಣೆ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಫ್ಲೋರ್‌ಬಾಲ್ ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಿರುವ ಸಂಘಟಕರ ಕ್ರಮ ಅಭಿನಂದನಾರ್ಹ ಎಂದರು.
ಕ್ರೀಡಾಕೂಟದ ಜಿಲ್ಲಾ ಸಂಚಾಲಕ ಎಂ.ಕೆ. ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದ ೧೩ಕ್ಕೂ ಹೆಚ್ಚು ಜಿಲ್ಲೆಗಳ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ತೋಂಟದ ಸಿದ್ಧೇಶ್ವರ ಪ.ಪೂ ಕಾಲೇಜು ವಿದ್ಯಾರ್ಥಿನಿ ನಯನಾ ಅಳವಂಡಿ ಪ್ರಾರ್ಥನಾಗೀತೆ ಹಾಡಿದರು. ಪ್ರಾ. ಅಶೋಕ ಅಂಗಡಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರೆ, ಎಸ್.ಎಸ್. ಸೋಮಣ್ಣವರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ.ಎನ್. ಕುರ್ತಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಡುವಿನಮನಿ, ಎಸ್.ಎಸ್. ಕುಲಕರ್ಣಿ, ಬಿ.ಜಿ. ಗಿರಿತಮ್ಮಣ್ಣವರ, ಹೇಮಂತ ಶಿವಪ್ಪಯ್ಯನಮಠ, ಶಶಿಧರ ಕುರಿ, ಎಸ್.ಎಸ್. ಕುಲಕರ್ಣಿ, ವಿ.ಕೆ. ದ್ಯಾಮನಗೌಡರ, ಶಶಿಧರ ಕುರಿ, ವಿ.ಎಸ್. ದಲಾಲಿ, ಅರ್ಜುನ ಗೊಳಸಂಗಿ, ಬಿ.ಎಸ್. ರಾಠೋಡ, ವೈ.ಎಸ್. ಹುನಗುಂದ, ವೈ.ಆರ್. ಬೇಲೇರಿ, ಕಿಶೋರಬಾಬು ನಾಗರಕಟ್ಟಿ, ಬಿ.ಎಂ. ಚಿಕ್ಕಣ್ಣನವರ, ಎ.ಜೆ. ಹಿರೇಗೌಡ್ರ, ಮಹೇಶ ನವಲಗುಂದ, ರವಿ ಕುಲಕರ್ಣಿ, ಎಸ್.ಆರ್. ಹಿರೇಗೌಡರ, ಉಮೇಶ ಹಿರೇಮಠ, ಪವಾಡಿಗೌಡ್ರ, ಎಸ್.ಐ. ಮೇಟಿ, ಪ್ರಿಯಾಂಕಾ ನಡುವಿನಮನಿ, ಸುಧಾ ಹುಚ್ಚಣ್ಣವರ ಸೇರಿದಂತೆ ಪ.ಪೂ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಜರಿದ್ದರು.
ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಿಕ ಮಾತನಾಡಿ, ಪ್ರತಿವರ್ಷವೂ ಪ.ಪೂ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸುವಾಗ ಒಂದೊಂದು ಜಿಲ್ಲೆಗೆ ಆಯಾ ಕ್ರೀಡೆಗಳು ನಿಗದಿಯಾಗಿರುತ್ತವೆ. ಫ್ಲೋರ್‌ಬಾಲ್ ಕ್ರೀಡೆ ೬೦ರ ದಶಕದಲ್ಲಿ ಹುಟ್ಟಿಕೊಂಡರೂ ಭಾರತದಲ್ಲಿ ಹೆಚ್ಚು ಚಿರಪರಿಚಿತವಾಗಿಲ್ಲ. ಈ ಕ್ರೀಡೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರಲ್ಲದೆ, ನಿರ್ಣಾಯಕರಿಗೆ ನಿಷ್ಪಕ್ಷಪಾತವಾದ ನಿರ್ಣಯ ನೀಡಲು ಮನವಿ ಮಾಡಿದರು.