ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ: ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ ಎಂಟ್ರಿ!

0
Spread the love

ಬೆಂಗಳೂರು:- ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ನಲ್ಲಿ ಇತ್ತೀಚಿನ ಬೆಳವಣಿಗೆ ನೋಡಿದ್ರೆ ಸರ್ಕಾರ ಯಾವಾಗ ಪತನ ಆಗತ್ತೋ ಎಂಬ ವಿಚಾರಗಳು ರಾಜ್ಯ ರಾಜಕೀಯದಲ್ಲಿ ಚರ್ಚೆ ಹುಟ್ಟು ಹಾಕಿದೆ.

Advertisement

ಕಳೆದ ಎರಡು ವಾರಗಳಿಂದ ಕರ್ನಾಟಕ ಕಾಂಗ್ರೆಸ್ ಅಲ್ಲೋಲ ಕಲ್ಲೋಲಗೊಂಡಿದೆ. ಶಾಸಕ ಬಿಆರ್ ಪಾಟೀಲ್, ರಾಜೂ ಕಾಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರಿಂದ ಕಾಂಗ್ರೆಸ್ ಇಷ್ಟು ದಿನ ಬಳಿದುಕೊಂಡಿದ್ದ ಬಣ್ಣ ಮಾಸಿದಂತಾಗಿದೆ. ಕಾಂಗ್ರೆಸ್‌ ಶಾಸಕರಲ್ಲಿ ಅಸಮಾಧಾನದ ಅಲೆ ಹೆಚ್ಚುತ್ತಿರುವುದರ ಮಧ್ಯೆ ಪಕ್ಷದ ರಾಜ್ಯ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಗೊಂದಲ, ಬಿಕ್ಕಟ್ಟು ಶಮನಕ್ಕೆ ಅವರು ಶಾಸಕರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಲಿದ್ದಾರೆ.

ಬಹಿರಂಗ ಅಸಮಾಧಾನ ಹೊರಹಾಕಿದ್ದ ಬಿಆರ್ ಪಾಟೀಲ್ ಹಾಗೂ ರಾಜೂ ಕಾಗೆಗೆ ಸುರ್ಜೆವಾಲಾ ಬುಲಾವ್ ಹೊರಡಿಸಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುತ್ತಿರುವ ಸುರ್ಜೆವಾಲ ಮಾಡಲಿರುವ ಮೊದಲನೇ ಕೆಲಸವೇ ಬಿಆರ್ ಪಾಟೀಲ್ ಹಾಗೂ ರಾಜೂ ಕಾಗೆ ಜೊತೆಗೆ ಸಮಾಲೋಚನೆ. ಮಧ್ಯಾಹ್ನ 1.30 ಕ್ಕೆ ಬಿಆರ್ ಪಾಟೀಲ್, 2 ಕ್ಕೆ ರಾಜೂ ಕಾಗೆ ಜೊತೆಗೆ ಸುರ್ಜೆವಾಲಾ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಬಹಿರಂಗ ಅಸಮಾಧಾನಕ್ಕೆ ಕಾರಣಗಳನ್ನು ಚರ್ಚೆ ಮಾಡಲಿರುವ ಸುರ್ಜೆವಾಲ, ಬಳಿಕ ಎಚ್ಚರಿಕೆ ನೀಡುವ ಸಾಧ್ಯತೆಯೂ ಇದೆ.

ಇಷ್ಟಕ್ಕೇ ಸುರ್ಜೆವಾಲ ಕೆಲಸ ಮುಗಿಯುವುದಿಲ್ಲ. ಮತ್ತೆರಡು ದಿನ ರಾಜ್ಯದಲ್ಲೇ ಠಿಖಾಣಿ ಹೂಡಲಿರುವ ಅವರು, ಬೆಂಗಳೂರು ಭಾಗದ 40 ಶಾಸಕರ ಜೊತೆಗೆ 20 ನಿಮಿಷಗಳ ಕಾಲ ಮಾತುಕತೆ ನಡೆಸಲಿದ್ದಾರೆ. ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಎಎಸ್ ಪೊನ್ನಣ್ಣ, ಕುಣಿಗಲ್ ರಂಗನಾಥ್ ಅವರಂತಹ ಕೆಲವು ಶಾಸಕರು ಬಿಜೆಪಿಯನ್ನು ಎದುರಿಸುವುದರಲ್ಲಿ ಮುಂಚೂಣಿಯಲ್ಲಿದ್ದರೆ, ಕೆಲವು ಶಾಸಕರು ತಮ್ಮ ತಮ್ಮದೇ ಲೋಕದಲ್ಲಿ ಮೈಮರೆತು ಹೋಗಿರುವ ಉದಾಹರಣೆಗಳೂ ಹೈಕಮಾಂಡ್ ಮುಂದಿದೆ. ಇದನ್ನೇ ಪರಶೀಲಸಿರುವ ಸುರ್ಜೆವಾಲ, ಶಾಸಕರ ಅಹವಾಲು ಆಲಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here