ವಿಜಯಸಾಕ್ಷಿ ಸುದ್ದಿ, ಡಂಬಳ: ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿನಂತೆ ಏನು ತಿನ್ನಬೇಕು, ಯಾವಾಗ ತಿನ್ನಬೇಕು, ತಿನ್ನುವ ಆಹಾರ ಹೇಗಿರಬೇಕು ಎಂಬುದನ್ನು ನಾವು ಚೆನ್ನಾಗಿ ಅರಿತಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯಕರವಾದ ಡಯಟ್ ಎಂದಾಕ್ಷಣ ಕಡಿಮೆ ತಿನ್ನುವುದು ಎಂದಲ್ಲ. ಒಳ್ಳೆಯ ಆಹಾರವನ್ನು, ದೇಹಕ್ಕೆ ಶಕ್ತಿ ನೀಡುವ ವಿವಿಧ ಪೋಷಕಾಂಶಗಳಿರುವ ಆರೋಗ್ಯಕರವಾದ ಆಹಾರವನ್ನು ತಿನ್ನವುದರ ಮೂಲಕ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಕ್ಷೇತ್ರ ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ ಹೇಳಿದರು.
ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ್ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಾಧಿಕಾರಿ ಮಂಜುಳಾ ಸಜ್ಜನರ ಮಾತನಾಡಿ, ಪೌಷ್ಟಿಕ ಆಹಾರದ ಬಳಕೆ ಮತ್ತು ಅದರ ಮಹತ್ವದ ಕುರಿತು, ತರಕಾರಿ ಸೊಪ್ಪು, ಮೊಳಕೆ ಬರಿಸಿದ ಕಾಳುಗಳ ಸೇವನೆಯ ಪ್ರಯೋಜನಗಳನ್ನು ತಿಳಿಸಿಕೊಟ್ಟರು.
ವೈದ್ಯಾಧಿಕಾರಿಗಳಾದ ಡಾ. ತಸ್ಮಿಯಾ ಮಾತನಾಡಿ, ಹೆಣ್ಣಿಗೆ ತನ್ನ ಬಾಲ್ಯದಲ್ಲಿ, ಯೌವನದಲ್ಲಿ, ಹೆರಿಗೆಯ ನಂತರ, ಹಾಗೆಯೇ ವೃದ್ಧಾಪ್ಯದಲ್ಲಿ ಬೇರೆ ಬೇರೆ ರೀತಿಯ ಬೇರೆ ಬೇರೆ ಪ್ರಮಾಣದ ಪೋಷಕಾಂಶಗಳು ಬೇಕಾಗುತ್ತದೆ. ಈಗಿನ ಹೆಚ್ಚಿನ ಮಹಿಳೆಯರು ಮನೆಯ ಕೆಲಸದ ಜೊತೆ ಕಚೇರಿ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಅವರ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಆರೋಗ್ಯಕರ ಜೀವನ ನಡೆಸಲು ಮಹಿಳೆಯರು ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕಾರದ ರಾಜಪ್ಪ, ಸೇವಾ ಪ್ರತಿನಿಧಿ ಯಲ್ಲಮ್ಮ, ಗಂಗಮ್ಮ, ಒಕ್ಕೂಟದ ಅಧ್ಯಕ್ಷೆ ರಜಿಯಾ ಬೇಗಮ್, ಜ್ಞಾನ ವಿಕಾಸ್ ಸದಸ್ಯರು ಭಾಗವಹಿಸಿದರು. ಸೇವಾ ಪ್ರತಿನಿಧಿ ಯಲ್ಲಮ್ಮ ಸ್ವಾಗತಿಸಿದರು, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು, ಮೇಲ್ವಿಚಾರಕ ಅಣ್ಣಪ್ಪ ಬಾರ್ಕಿ ವಂದಿಸಿದರು.