ಬೆಂಗಳೂರು:– ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 2024 ರ ಲೋಕಸಭಾ ಚನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈ ವಿಚಾರವಾಗಿ ಮಾಜಿ ಸಚಿವ ರಾಜಣ್ಣ ಅವರು ತಮ್ಮದೇ ಸರ್ಕಾರದ ವಿರುದ್ದ ಹರಹಾಯ್ದಿದರು. ಈ ಬೆನ್ನಲ್ಲೇ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚನೆ ಕೊಟ್ಟಿದ್ದಾರೆ. ಅದರಂತೆ ರಾಜಣ್ಣ ಅವರನ್ನು ವಜಾ ಮಾಡಲಾಗಿತ್ತು.
ರಾಜಣ್ಣ ಅವರನ್ನ ಸಂಪುಟದಿಂದ ವಜಾ ಮಾಡಿಸುವಲ್ಲಿ ಯಾರ ಪಾತ್ರವಿದೆ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ತಮ್ಮ ನಾಯಕನನ್ನು ಸಂಪುಟದಿಂದ ವಜಾ ಮಾಡಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ರಾಜಣ್ಣ ಭಾವನಾತ್ಮಕ ಪತ್ರವೊಂದು ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಆತ್ಮೀಯ ಹಾಗೂ ಅಭಿಮಾನಿ ಬಂಧುಗಳಲ್ಲಿ ನನ್ನದೊಂದು ಕೋರಿಕೆ. ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ರಾಜಕೀಯ ಬದಲಾವಣೆಗೂ ಎಂದೂ ಧೃತಿಗೆಟ್ಟಿಲ್ಲ. ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಾನು ಸಹ ನಿಮ್ಮನ್ನು ನನ್ನ ಕುಟುಂಬವೆಂದೇ ಭಾವಿಸಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಯಾವುದೇ ತಪ್ಪು ನಿರ್ಧಾರ ಮಾಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ.
ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ರವರ ಹಾದಿಯಲ್ಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ಬರೆದಿದ್ದಾರೆ.



