ಬೆಂಗಳೂರು: ಗುರಪ್ಪನಪಾಳ್ಯದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಾಲಿಕೆ ಅಧಿಕಾರಿಗಳು ಸಂಬಂಧಿತ ಕ್ಲಿನಿಕ್ಗೆ ₹50 ಸಾವಿರ ದಂಡ ವಿಧಿಸಿದ್ದಾರೆ.
ರಸ್ತೆ ಬದಿಯಲ್ಲಿ ಸೂಜಿ, ಸಿರಿಂಜ್, ಪ್ಲಾಸ್ಟರ್, ಇಂಜೆಕ್ಷನ್ ಪೈಪ್ ಸೇರಿದಂತೆ ವಿವಿಧ ವೈದ್ಯಕೀಯ ತ್ಯಾಜ್ಯಗಳು ಬಿದ್ದಿರುವುದನ್ನು ಪೌರಕಾರ್ಮಿಕರು ಗಮನಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಾರ್ಷಲ್ಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ತ್ಯಾಜ್ಯದಲ್ಲಿ ಪತ್ತೆಯಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಆಧರಿಸಿ ಗುರಪ್ಪನಪಾಳ್ಯದ ಪಲ್ಸ್ ಪಾಲಿ ಕ್ಲಿನಿಕ್ನಿಂದ ತ್ಯಾಜ್ಯ ವಿಲೇವಾರಿಯಾಗಿರುವುದು ಬೆಳಕಿಗೆ ಬಂದಿದೆ. ವೈದ್ಯಕೀಯ ತ್ಯಾಜ್ಯವನ್ನು ಸರ್ಕಾರ ನಿಗದಿಪಡಿಸಿದ ಸಂಸ್ಥೆ ಮೂಲಕ ವಿಲೇವಾರಿ ಮಾಡದೇ, ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗವು ಕ್ಲಿನಿಕ್ಗೆ ₹50 ಸಾವಿರ ದಂಡ ವಿಧಿಸಿ ಕ್ರಮ ಕೈಗೊಂಡಿದೆ.
ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



