ಬೆಂಗಳೂರು:- ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಇದನ್ನು ‘ಕರಾಳ ದಿನ’ ಎಂದು ಕರೆದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಸಲ್ಲಿಸಿ ಹೊರಟಿದ್ದು ತಪ್ಪೇನೂ ಇಲ್ಲ. ರಾಜ್ಯಪಾಲರಿಗೆ ಭಾಷಣವನ್ನು ಓದದೇ ಹೊರಡುವ ಅಧಿಕಾರವೂ ಸಂವಿಧಾನದಲ್ಲೇ ಇದೆ. ಕಾಂಗ್ರೆಸ್ ಶಾಸಕರು ಅಗೌರವ ತೋರಿದ್ದು ಗೂಂಡಾಗಿರಿ ಎಂದು ಆರೋಪಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅಶೋಕ್, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದ್ದು, ಹೈಕಮಾಂಡ್ ನಾಯಕರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.



