ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಂಚಮಸಾಲಿ ಸಮಾಜ ಬಾಂಧವರು ನ್ಯಾಯಯುತವಾದ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ಸೌಧದ ಎದುರು ಕೈಗೊಂಡ ಪ್ರತಿಭಟನಾ ಸಮಾವೇಶ ಹತ್ತಿಕ್ಕಲು ಕೈಗೊಂಡ ಸರ್ಕಾರದ ಕ್ರಮವನ್ನು ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಖಂಡಿಸಿದ್ದಾರೆ.
ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿ, ಸರ್ಕಾರ ಪೊಲೀಸರನ್ನು ಮುಂದಿಟ್ಟುಕೊಂಡು ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ಮಾಡಿಸಿ ಹೆದರಿಸಿ-ಬೆದರಿಸುವ ಕಾರ್ಯ ಮಾಡಿರುವುದು ಅಕ್ಷಮ್ಯ ಮತ್ತು ಅತ್ಯಂತ ಹೇಯ ಕೃತ್ಯ. ಕಳೆದ ಅನೇಕ ವರ್ಷಗಳ ನ್ಯಾಯಯುತ ಬೇಡಿಕೆಗಾಗಿ ಶಾಂತಿಯುತ ಹೋರಾಟ ಮಾಡಲು ಬಂದವರ ಮೇಲೆ ಈ ರೀತಿ ದಬ್ಬಾಳಿಕೆ ಮಾಡಿ ವಶಕ್ಕೆ ಪಡೆದಿರುವುದು ಸಮಾಜವನ್ನು ಕೆರಳಿಸಿದೆ. ಹೋರಾಟಗಾರರೊಂದಿಗೆ ಮಾತನಾಡುವ ಸೌಜನ್ಯವನ್ನು ಮುಖ್ಯಮಂತ್ರಿಗಳು ತೋರದಿರುವದು ಖೇದಕರ ಸಂಗತಿಯಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಶ್ರೀಗಳ ಹಾಗೂ ಪಂಚಮಸಾಲಿ ಹೋರಾಟಗಾರರ ಕ್ಷಮೆ ಕೇಳಬೇಕು ಮತ್ತು ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ಸಮಾಜ ಬಾಂಧವರು ಒಗ್ಗಟ್ಟಿನಿಂದ ರಾಜ್ಯಾದ್ಯಂತ ಸರ್ಕಾರದ ಸರ್ವಾಧಿಕಾರಿ ಧೋರಣೆ, ಕುತಂತ್ರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.



