ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆ ಆಗಿರುವ ಅನುದಾನವನ್ನು ಎಲ್ಲ 23 ವಾರ್ಡ್ ಗಳಿಗೆ ನೀಡುವ ಬದಲು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ತಮಗೆ ಬೇಕಾದ ವಾರ್ಡ್ಗಳಿಗೆ ಹಾಕಿಕೊಂಡಿದ್ದಾರೆ. ಕಾರಣ, ಅನುದಾನವನ್ನು ಎಲ್ಲ ವಾರ್ಡ್ ಗಳಿಗೂ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಸೋಮವಾರ ಲಕ್ಷ್ಮೇಶ್ವರ ಪುರಸಭೆಯ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ 1 ಕೋಟಿ 93 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಏಕಾಏಕಿ ವಿಶೇಷ ಸಾಮಾನ್ಯ ಸಭೆ ನಡೆಸಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ವಾರ್ಡ್ಗಳಿಗೆ ಕ್ರಿಯಾಯೋಜನೆ ತಯಾರಿಸಿ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಿರುವುದು ಖಂಡನೀಯ. ಎಲ್ಲ ವಾರ್ಡ್ಗಳ ಜನರು ಪುರಸಭೆಗೆ ತೆರಿಗೆ ಪಾವತಿಸುವುದರಿಂದ ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಬೇಕಾದದ್ದು ಪ್ರಜಾಪ್ರತಿನಿಧಿಗಳ ಕರ್ತವ್ಯ.
ಈಚೆಗೆ ಸುರಿದ ಮಳೆಗೆ ಪ್ರವಾಹ ರೀತಿಯಲ್ಲಿ ಮಳೆ ನೀರು ಹರಿದು ಸಾಕಷ್ಟು ತೊಂದರೆ ಆಗಿರುವ ವಾರ್ಡ್ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸದಸ್ಯರು ಸೂಚಿಸಿದರೂ ಸಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ತಾರತಮ್ಯ ಮಾಡಿರುವುದು ಕಂಡು ಬಂದಿದೆ. ಕಾರಣ ಜಿಲ್ಲಾಧಿಕಾರಿಗಳು ವಿಶೇಷ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕ್ರಿಯಾಯೋಜನೆಗೆ ಅನುಮೋದನೆ ನೀಡಬಾರದು. ಹಾಗೇನಾದರೂ ಅನುಮೋದನೆ ಕೊಟ್ಟಿದ್ದೇ ಆದರೆ ಪುರಸಭೆ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಬಿಜೆಪಿ ಸದಸ್ಯರಾದ ಮಹೇಶ ಹುಲಬಜಾರ, ವಾಣಿ ಹತ್ತಿ, ಮಹಾದೇವಪ್ಪ ಅಣ್ಣಿಗೇರಿ, ಪೂರ್ಣಿಮಾ ಪಾಟೀಲ, ಕವಿತಾ ಶೆರಸೂರಿ, ಶೋಭಾ ಮೆಣಸಿನಕಾಯಿ, ಮಂಜಕ್ಕ ಗುಂಜಳ, ಪೂಜಾ ಖರಾಟೆ, ಮಂಜುನಾಥ ಹೊಗೆಸೊಪ್ಪಿನ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಬಸವರಾಜ ಕಲ್ಲೂರ ಇದ್ದರು.
ಬಿಜೆಪಿ ಮುಖಂಡ ಗಂಗಾಧರ ಮೆಣಸಿನಕಾಯಿ ಮಾತನಾಡಿ, ಅನುದಾನವನ್ನು ಎಲ್ಲ ವಾರ್ಡ್ ಗಳ ಅಭಿವೃದ್ಧಿಗೆ ಬಳಸುವುದು ನ್ಯಾಯ. ಆದರೆ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್ ಗಳಿಗೆ ಹಂಚಿಕೆ ಮಾಡಿರುವುದು ಪುರಸಭೆ ಅಧ್ಯಕ್ಷರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಕ್ರಿಯಾಯೋಜನೆಯನ್ನು ಅನುಮೋದಿಸಬಾರದು. ಮತ್ತೊಮ್ಮೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಇಲ್ಲದಿದ್ದರೆ ಪುರಸಭೆ ಎದುರು ಪಕ್ಷದ ಕಾರ್ಯಕರ್ತರೊಂದಿಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.