ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳನ್ನು ಪ್ರತಿದಿನ ಶಾಲೆಗೆ ಕಳಿಸುವದರೊಂದಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.
ಇಲ್ಲಿಯ ಮಾರುತಿ ನಗರದ ಸರಕಾರಿ ಹಿರಿಯ ಪ್ರಾಥಮಿಕ (ಡಿ.ಪಿ.ಇ.ಪಿ)ಶಾಲೆಯ ಮಕ್ಕಳಿಗೆ ಸರಕಾರ ನೀಡಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ವಿತರಿಸಿ ಮಾತನಾಡಿದ ಅವರು, ವಾರದ ಎರಡು ದಿನ ಮಾತ್ರ ಸರಕಾರ ಮೊಟ್ಟೆ ನೀಡುತ್ತಿತ್ತು. ಆದರೆ ಮಕ್ಕಳಿಗೆ ಹೆಚ್ಚಿನ ಪ್ರೋಟಿನ್ ದೊರೆಯಲೆಂದು ಅಜೀಂ ಪ್ರೇಮಜಿ ಅವರ ಸಂಸ್ಥೆಯು ವಾರದ ಉಳಿದ 4 ದಿನದ ಮೊಟ್ಟೆಯನ್ನು ಮಕ್ಕಳಿಗೆ ನೀಡುತ್ತೇವೆ ಎಂದು ಮುಂದೆ ಬಂದಿದ್ದು ಸ್ವಾಗತಾರ್ಹ. ಇಂತಹ ಇನ್ನಿತರ ಸಂಸ್ಥೆಯವರು ಶಿಕ್ಷಣದ ಅಭಿವೃದ್ಧಿಗಾಗಿ ದೇಣಿಗೆ ನೀಡಿ ಸರಕಾರದ ಜೊತೆ ಕೈಜೋಡಿಸಬೇಕಾಗಿದೆ ಎಂದರು.
ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ ಉಪಾದ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು, ಪಿ.ಡಿ.ಒ ರಾಜಕುಮಾರ ಭಜಂತ್ರಿ, ತುಕಾರಾಮ ಹುಲಗಣ್ಣವರ ಹಾಜರಿದ್ದರು.