ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಪಟ್ಟಣದ ಎಸ್.ಆರ್. ಪಾಟೀಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನೇಕ ಇತಿಹಾಸಗಳನ್ನು ಹೊಂದಿದ್ದು, ಈ ಶಾಲೆಗೆ ಬರುವ ಮಕ್ಕಳಿಗೆ ಎಸ್.ಆರ್. ಪಾಟೀಲ ಪ್ರತಿಷ್ಠಾನ ಸಮಿತಿಯಿಂದ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಘೋಷಿಸಿದರು.
ಅವರು ಗುರುವಾರ ಪಟ್ಟಣದ ಎಸ್.ಆರ್. ಪಾಟೀಲ ಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಶ್ಯೂರ್ ರಾಗಿ ಮಾಲ್ಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಆರ್. ಪಾಟೀಲರವರ ನೇತೃತ್ವದಲ್ಲಿ ಪಟ್ಟಣದ ಹಿರಿಯರು ಸೇರಿ ಈ ಶಾಲೆಯನ್ನು ನಿರ್ಮಿಸಿದ್ದು ಇತಿಹಾಸವಾಗಿದೆ. ಒಟ್ಟು ೩೦ ಕೊಠಡಿಗಳನ್ನು ಹೊಂದಿರುವ ಈ ಶಾಲೆಯ ನವೀಕರಣಕ್ಕಾಗಿ ೯೦ ಲಕ್ಷ ರೂಗಳ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ ಎಂದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ಸೌಲಭ್ಯದಂತೆ ಈ ಶಾಲೆಗೆ ದಾಖಲಿಸುವ ಮಕ್ಕಳನ್ನು ಸಹ ಅವರ ಮನೆಯಿಂದ ಬಸ್‌ನಲ್ಲಿ ಕರೆತರಲು ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಶಾಲೆಗೆ ಬಸ್ಸನ್ನು ಸಹ ಒದಗಿಸಲಾಗುವುದು ಎಂದರು.
ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ದೃಷ್ಟಿಯಿಂದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಯಿತು. ಈಗ ೧ರಿಂದ ೧೦ನೇ ತರಗತಿ ಮಕ್ಕಳಿಗೆ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಇವರುಗಳ ಸಹಯೋಗದಲ್ಲಿ ರಾಗಿ ಮಾಲ್ಟ್ ವಿತರಣೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಕ್ಕಳು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಅಕ್ಷರ ಜ್ಞಾನವನ್ನು ಹೊಂದಬೇಕು. ಜೊತೆಗೆ ಶಾಲೆಯ ಹಾಗೂ ಕುಟುಂಬದ ಕಿರ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ತಾ.ಪಂ ಇಒ ರವಿ ಎ.ಎನ್., ಎಸ್‌ಡಿಎಂಸಿ ಅಧ್ಯಕ್ಷ ಗದಿಗೇಪ್ಪ ಕಿರೇಸೂರ, ಯೂಸುಪ್ ಇಟಗಿ, ಮೌನೇಶ ಹಾದಿಮನಿ, ದಾವಲಸಾಬ ಬಾಡಿನ, ಬಿಇಓ ರುದ್ರಪ್ಪ ಹುರಳಿ, ಅಕ್ಷರದಾಸೋಹಾಧಿಕಾರಿ ಬಸವರಾಜ ಅಂಗಡಿ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಎಸ್.ಆರ್. ಪಾಟೀಲ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಆಟ ಆಡಲು ಸಾಕಷ್ಟು ಸ್ಥಳಾವಕಾಶವಿದೆ. ಬರುವ ಶೈಕ್ಷಣಿಕ ವರ್ಷದೊಳಗೆ ಉಳಿದಿರುವ ಜಾಗದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲು ಅಧಿಕಾರಿಗಳು ಮುಂದಾಗಬೇಕು. ಅಗತ್ಯ ನೆರವು ನೀಡಲು ನಾನು ಸಿದ್ಧನಿದ್ದು, ಅಧಿಕಾರಿಗಳು ನಿರ್ಲಕ್ಷö್ಯ ವಹಿಸದೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ಖನಿಜ ನಿಗಮದ ಅಧ್ಯಕ್ಷರು.