ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ 118ನೇ ಪೀಠಾಧೀಶರಾಗಿದ್ದ ಶ್ರೀಮದ್ ರಂಭಾಪುರಿ ಶಿವಾನಂದ ಜಗದ್ಗುರುಗಳ ಪೀಠಾರೋಹಣದ ನಿಮಿತ್ತ ಗುರುವಾರ ಪೀಠದ ಭಕ್ತ, ಶಿಗ್ಲಿ ಗ್ರಾಮದ ನಿವಾಸಿ ವೀರಣ್ಣ ಪವಾಡದ ಅವರು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಲಿಂಗ. ವೀರಗಂಗಾಧರ ಜಗದ್ಗುರುಗಳ ಗದ್ದುಗೆ ಪೂಜೆ, ಜಗದ್ಗುರು ಶಿವಾನಂದ ಶಿವಾಚಾರ್ಯರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ನೂರಾರು ಭಾವಚಿತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ರಂಭಾಪುರಿ ಪೀಠ ವೀರಶೈವ ಧರ್ಮದ ಬೆಳೆವಣಿಗೆಗೆ ಮಹತ್ತರ ಕೊಡುಗೆ ನೀಡಿದೆ. ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸುವ ಮೂಲಕ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದೆ. ಪೀಠದ 118ನೇ ಜಗದ್ಗುರುಗಳಾಗಿದ್ದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಪೋನಿಷ್ಠರಾಗಿ ವೀರಶೈವ ಧರ್ಮದ ಉದ್ಧಾರ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು ಸಾರಿದ ಧರ್ಮಜ್ಯೋತಿಯ ಸಂದೇಶವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಸುಖ, ಶಾಂತಿ, ಸಮಾಧಾನ ಲಭಿಸುತ್ತದೆ ಎಂದು ತಿಳಿಸಿದರು.
ಈ ವೇಳೆ ಗುರುಲಿಂಗಯ್ಯಸ್ವಾಮಿ ಹಿರೇಮಠ, ಪ್ರಧಾನ ಅರ್ಚಕ ವೀರಯ್ಯಸ್ವಾಮಿ ನೆಗಳೂರ ಮಠ, ದಾಸೋಹದ ಕಾರ್ಯದರ್ಶಿ ಕೊಟ್ರೇಶ ಹಿರೇಮಠ ದಂಪತಿ ಇದ್ದರು.



