ವಿಜಯಸಾಕ್ಷಿ ಸುದ್ದಿ, ಮುಳಗುಂದ : ರೈತರ ಏಳಿಗೆಗಾಗಿ ಕೃಷಿ ಇಲಾಖೆಯಿಂದ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಅರ್ಹ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗದಗ ಕೃಷಿ ಉಪನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಹೇಳಿದರು.
ಅವರು ಪಟ್ಟಣ ಸಮೀಪದ ಹುಲಕೋಟಿ ಕೃಷಿ ಕೇಂದ್ರದಲ್ಲಿ ಸ್ಪಿಂಕ್ಲರ್‌ಗಳನ್ನು ರೈತರಿಗೆ ವಿತರಿಸಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಭಾರತ ಸರಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರ ಕೃಷಿಗೆ ಬೇಕಾಗುವ ಸಲಕರಣೆ ಸ್ಪಿಂಕ್ಲರ್ ನೀಡಲಾಗುತ್ತಿದ್ದು, ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.
ಹುಲಕೋಟಿ ಕೃಷಿ ಕೇಂದ್ರದ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ಮಾತನಾಡಿ, 2024/25ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿಗೆ ಅಟಲ ಭೂ ಜಲ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಜಿಲ್ಲೆಗೆ ಅನುದಾನ ಲಭ್ಯವಿದೆ. ಕೃಷಿ ಹೊಂಡ, ಕೊಳವೆ ಭಾವಿ, ತೆರದ ಬಾವಿ, ಹಳ್ಳದ ಅಕ್ಕಪಕ್ಕದಲ್ಲಿ ಜಮಿನು ಹೊಂದಿರುವ ರೈತ ಬಾಂಧವರು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿದ್ದು, ಎಲ್ಲಾ ವರ್ಗದ ರೈತರಿಗೆ ಶೇ 90 ಸಹಾಯ ಧನದಲ್ಲಿ ವಿತರಿಸಲಾಗುವುದು ಎಂದರು.