ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೃಷಿಕ್-ನವೋದ್ಯಮ ಪೋಷಣ ಕೇಂದ್ರ ಆರ್ಕೆವಿವೈ-ಇನ್ನೋವೇಷನ್ ಮತ್ತು ಕೃಷಿ-ಉದ್ಯಮಶೀಲತೆ ಕಾರ್ಯಕ್ರಮದ ಅಡಿಯಲ್ಲಿ 10ನೇ ಹಂತದ ಸ್ಟಾರ್ಟ್ಅಪ್ಗಳಿಗೆ ಒಪ್ಪಂದದ ಜ್ಞಾಪಕ ಪತ್ರ (ಎಂಒಎ) ಮತ್ತು ಸಹಾಯ ಧನ ವಿತರಣೆ ಸಮಾರಂಭವು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಂತದ ನಾಲ್ಕು ನವೋದ್ಯಮಿಗಳಿಗೆ (ರೂ.9.75 ಲಕ್ಷ), ಎಂಟು ಪ್ರಿಸೀಡ್ ಹಂತದ ನವೋದ್ಯಮಿಗಳಿಗೆ (ರೂ.27 ಲಕ್ಷ) ಮತ್ತು ಮೂರು ಸೀಡ್ ಹಂತದ ನವೋದ್ಯಮಿಗಳಿಗೆ (ರೂ. 37.50 ಲಕ್ಷ) ಮೊದಲನೆ ಕಂತಿನ ಸಹಾಯ ಧನ ವಿತರಿಸಲಾಯಿತು.
ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ, ಸ್ಟಾರ್ಟ್ಅಪ್ಗಳಿಂದ ಕೃಷಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ತಜ್ಞರನ್ನು, ವಿಜ್ಞಾನಿಗಳನ್ನು ಮಾರ್ಗದರ್ಶಕರಾಗಿ ನೇಮಿಸಲಾಗಿದೆ. ಈವರೆಗೆ 111 ಸ್ಟಾರ್ಟ್ಅಪ್ಗಳಿಗೆ ಅನುದಾನ ನೀಡಲಾಗಿದ್ದು, ಒಟ್ಟು 1630.46 ಲಕ್ಷ ಆದಾಯ, ಸಂಪನ್ಮೂಲ 957 ಉದ್ಯೋಗ ಸೃಷ್ಟಿ ಮಾಡಲಾಗಿದೆ. ಅಲ್ಲದೆ 1.2 ಲಕ್ಷ ರೈತರಿಗೆ ತಂತ್ರಜ್ಞಾನ ಪ್ರಸಾರ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಫ್ತಾರ್ ಯೋಜನೆ ಪ್ರತಿ ವರ್ಷ ಎರಡು ಬ್ಯಾಚ್ಗಳಲ್ಲಿ ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ಕೃಷಿಕ್-ನವೋದ್ಯಮ ಪೋಷಣ ಕೇಂದ್ರದ ಪ್ರಧಾನ ಸಂಶೋಧಕರು ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ಎಸ್.ಎಸ್. ಡೊಳ್ಳಿ ಸ್ವಾಗತಿಸಿ ಸ್ಟಾರ್ಟ್ಅಪ್ಗಳ ಬದ್ಧತೆಗಳ ಬಗ್ಗೆ ವಿವರಿಸಿದರು. ಸಹಾಯಕ ಪ್ರಧಾನ ಸಂಶೋಧಕರಾದ ಬಸವರಾಜ ಜಿ ವಂದಿಸಿದರು.
ಕೃಷಿ ವಿಶ್ವವಿದ್ಯಾಲಯದ ಕೃಷಿ ನವೋದ್ಯಮ ಪೋಷಣ ಕೇಂದ್ರದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 12ನೇ ಬ್ಯಾಚ್ಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿದಾರರು ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.