ವಿಜಯಸಾಕ್ಷಿ ಸುದ್ದಿ, ಗದಗ : ಸ್ಲಂ ಪ್ರದೇಶಗಳ ವಸತಿ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡುವ ಜೊತೆಗೆ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದೆ. ರಾಜ್ಯ ಸರ್ಕಾರದ ನಿರೀಕ್ಷೆಯಂತೆ ಅಧಿಕಾರಿಗಳು ಕೆಲಸ ಮಾಡಬೇಕು, ಒಂದು ವೇಳೆ ಕೊಳಗೇರಿಗಳ ವಸತಿ ಮತ್ತು ಅಭಿವೃದ್ಧಿಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳಲಾಗುವುದೆಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಎಚ್ಚರಿಕೆ ನೀಡಿದರು.
ಅವರು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯಂದ ಹಮ್ಮಿಕೊಂಡಿದ್ದ ಶ್ರಮಜೀವಿಗಳ ಸಮಾವೇಶದಲ್ಲಿ ಗದಗ-ಬೆಟಗೇರಿ ನಗರದ ನೂರಾರು ಸ್ಲಂ ಪ್ರದೇಶದ ಕುಟುಂಬಗಳಿಗೆ ಕ್ರಯಪತ್ರಗಳನ್ನು ವಿತರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡವರು, ಮಹಿಳೆಯರು, ಶೋಷಿತರು ಮತ್ತು ಹಿಂದುಳಿದ ಸಮುದಾಯದ ಜನರು ಸ್ವಾಭಿಮಾನದ ಬದುಕು ನಡೆಸಬೇಕೆಂಬ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವರೆಲ್ಲರೂ ಮುಖ್ಯವಾಹಿನಿಗೆ ಬರಲು ಹಾಗೂ ಅವರಿಗೆ ಸಮಾನವಾದ ಅವಕಾಶ ಸಿಗಬೇಕೆಂದು ನಮ್ಮ ಸರ್ಕಾರದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದು ಡಾ. ಅಂಬೇಡ್ಕರರು ನೀಡಿರುವ ಸಂವಿಧಾನದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಸ್ಥಳೀಯ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಕೊಳಗೇರಿಗಳ ಸಮೀಕ್ಷೆ ನಡೆಸಲಾಗುವುದು.
ರಾಜ್ಯದ ಕೊಳಗೇರಿ ಪ್ರದೇಶದ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಪ್ರಾರಂಭಿಸಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನಾ ಸಂಚಾಲಕ ಜರ್ನಾಧನ ಹಳ್ಳಿಬೆಂಚಿ, ಸಾವಿತ್ರಿಬಾ ಫುಲೆ ಮಹಿಳಾ ಸಮಿತಿ ಸಂಚಾಲಕಿ ಶೋಭಾ ಕಮತರ, ಜಿಲ್ಲಾ ದಲಿತ ಸಂಘರ್ಸ ಸಮಿತಿ ಸಂಚಾಲಕ ವೆಂಕಟೇಶಯ್ಯ, ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹರುನಿಸಾ ಡಂಬಳ, ಮಕ್ತುಮಸಾಬ ಮುಲ್ಲಾನವರ, ನಜೀರ ಹಾವಗಾರ, ಸಾಕ್ರುಬಾಯಿ ಗೋಸಾವಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗದಗ-ಬೆಟಗೇರಿ ನಗರದಲ್ಲಿ ಘೋಷಣೆಯಾಗಿರುವ ಪ್ರದೇಶಗಲ್ಲಿ ವಸತಿ ಮತ್ತು ಮೂಲಭೂತ ಸೌಲಭ್ಯಕ್ಕೆ ಅನುದಾನ ನೀಡಲು, ಅಘೋಷಿತ ಸ್ಲಂ ಪ್ರದೇಶಗಳ ಘೋಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ಲಂ ಸಮಿತಿಯಿಂದ ಜನರ ಸಮಸ್ಯೆಗಳ ಕುರಿತು ಅನೇಕ ಹೋರಾಟಗಳನ್ನು ನಡೆಸಿ ಅಧಿಕಾರಿಗಳ ಗಮನಕ್ಕೆ ತಂದರೂ ಬೆಲೆ ನೀಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.