ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಡಮಾಡುವ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರ ಕೃಷಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ರೈತರಿಗೆ ಬಿತ್ತನೆ ಮಾಡಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಕಡಲೆ, ಜೋಳದ ಬೀಜ ವಿತರಣೆ ಮಾಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಬಿತ್ತನೆ ಮಾಡಿ ಉತ್ತಮ ಫಸಲು ಪಡೆಯಬೇಕು ಎಂದರು.
ಗದಗ-ಬೆಟಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಮೇಶ ಜಟ್ಟಿ ಮಾತನಾಡಿ, ಹಿಂಗಾರು ಹಂಗಾಮು ಈಗಷ್ಟೇ ಪ್ರಾರಂಭವಾಗುತ್ತಿದ್ದು, ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಿ ಸಂಪೂರ್ಣವಾಗಿ ತೇವಗೊಂಡ ನಂತರ ಬೀಜಗಳನ್ನು ಬೀಜೋಪಚಾರ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ರಾಮಪ್ಪ ಹಚ್ಚಪ್ಪನವರ ವಹಿಸಿದ್ದರು.
ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ, ಕುಬೇರಗೌಡ ಪಾಟೀಲ್, ಮಲ್ಲಿಕಾರ್ಜುನ ಇದಲಿ, ಭೀಮಪ್ಪ ರಾಮಜಿ, ಬಾಳಪ್ಪ ಗಂಗರಾತ್ರಿ, ಫಕೀರಪ್ಪ ಜೋಗಿನ, ರಾಮಪ್ಪ ಗುಡ್ಲಾನೂರ, ರಾಮಣ್ಣ ಕಂಕರಿ, ಸುರೇಶ ಗುಂಡಪ್ಪನವರ, ಬಸವರಾಜ ಯತ್ನಟ್ಟಿ, ರಾಮಣ್ಣ ಗುಡ್ಲಾನೂರ, ವೆಂಕಟೇಶ ಪೂಜಾರ, ಮಂಜುನಾಥ ತುಪ್ಪದ, ರಾಮಣ್ಣ ಖಂಡರೆ ಸೇರಿದಂತೆ ರೈತರು ಪಾಲ್ಗೊಂಡಿದ್ದರು.



