ಗದಗ:- ಗದಗ ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಹುಳು ತಿಂದಿರುವ ಕಳಪೆ ಬೀಜ ವಿತರಣೆ ಮಾಡುತ್ತಿರುವುದು ರೈತ ಸಂಘ ನಡೆಸಿದ ಕಾರ್ಯಾಚರಣೆಯಲ್ಲಿ ಬಟಾಬಯಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸುವ ಬಿತ್ತನೆ ಬೀಜ ತುಂಬಾ ಕಳಪೆ ಆಗಿದ್ದು, ಬೀಜದ ಪ್ಯಾಕೇಟ್ ಓಪನ್ ಮಾಡಿದ್ರೆ ಸಾಕು, ನುಶಿ ತಿಂದ ಕಳಪೆ ಬೀಜ ಪತ್ತೆಯಾಗಿದೆ. ಹುಳ ತಿಂದ ಬೀಜ ಕೃಷಿ ಇಲಾಖೆ ಹೇಗೆ ಸರ್ಟಿಫೈಡ್ ಮಾಡಿದೆ ಅಂತ ರೈತರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇಲಾಖಾ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಒಂದೆಡೆ ಮುಂಗಾರು ಮಳೆ ಉತ್ತಮವಾಗಿದ್ದು, ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಗದಗ ಜಿಲ್ಲೆಯಲ್ಲಿ ಹೆಸರು ಬಿತ್ತನೆಗೆ ರೈತರು ತಯಾರಿ ನಡೆಸಿದ್ದಾರೆ. ಆದ್ರೆ, ಕಳಪೆ ಬೀಜ ನೋಡಿ ರೈತರು ಕಂಗಾಲಾಗಿದ್ದಾರೆ. ಇಂಥ ಬೀಜ ಬಿತ್ತನೆ ಮಾಡಿದ್ರೆ, ನಾಟಿಯಾಗಲ್ಲ.. ಇದು ಸರ್ಕಾರ ರೈತರಿಗೆ ಮಾಡುವ ಮೋಸ ಅಂತ ಕಿಡಿಕಾರಿದ್ದಾರೆ. ಅಲ್ಲದೇ ಕಳಪೆ ಬೀಜ ವಿತರಣೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರೈತರು ಆಗ್ರಹಿಸಿದ್ದಾರೆ. ಮೊದ್ಲೆ ರೈತರು ಸಂಕಷ್ಟದಲ್ಲಿ ಇದ್ದಾರೆ. ಇಂಥ ಸ್ಥಿತಿಯಲ್ಲಿ ಕಳಪೆ ಬೀಜ ವಿತರಣೆ ಮಾಡಿದ್ರೆ ಹೇಗೆ ಅಂತ ರೈತರು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಕಳಪೆ ಬೀಜ ವಿತರಣೆ ನಿಲ್ಲಿಸಬೇಕು. ರೈತರಿಗೆ ಆಗುತ್ತಿರುವ ಮೋಸ ತಡೆಯಬೇಕು ಅಂತ ಒತ್ತಾಯಿಸಿದ್ದಾರೆ.