ನಿರ್ದೇಶನ ಉಲ್ಲಂಘಿಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ದಿವ್ಯ ಪ್ರಭು

0
District Bankers Progress Review Committee
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ರಾಜ್ಯ ಸರಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡದಿರುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈಗಾಗಲೇ ಸಾಕಷ್ಟು ಬಾರಿ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ.

Advertisement

ಆದಾಗ್ಯೂ ಕುಂದಗೋಳ, ನವಲಗುಂದ ಸೇರಿ ಕೆಲವು ಕಡೆ ಬ್ಯಾಂಕಗಳು ಪರಿಹಾರ ಹಣವನ್ನು ರೈತರ ಸಾಲಕ್ಕೆ ಹೊಂದಿಸುತ್ತಿರುವ ಕುರಿತು ದೂರು, ವರದಿಗಳು ಬರುತ್ತಿವೆ. ಈ ವಿಷಯದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಬ್ಯಾಂಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಮಿತಿಯ ಸಹ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2024ರ ಮುಂಗಾರು ವಿಫಲವಾಗಿದ್ದರಿಂದ ರಾಜ್ಯ ಸರಕಾರ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪಡೀತ ತಾಲೂಕುಗಳೆಂದು ಘೋಷಣೆ ಮಾಡಿ, ಸರಕಾರದ ನಿಯಮಾವಳಿಗಳ ಪರಿಹಾರ ಹಣ, ಇತರ ಸೌಲಭ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭವಾಗುತ್ತಿರುವದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆಗೆ ಸಿದ್ದಗೊಳಿಸಬೇಕು, ಬೀಜ, ಗೊಬ್ಬರ ಖರೀದಿಸಬೇಕು. ಅವರ ನೆರವಿಗಾಗಿ ರಾಜ್ಯ ಸರಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೇರವಾಗಿ ಬರಪರಿಹಾರ ಜಮೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರೈತರಿಗೆ ಸರಕಾರಗಳಿಂದ ನೀಡುವ ಸಹಾಯಧನ, ಸಬ್ಸಿಡಿ, ಬರಪರಿಹಾರ ಮುಂತಾದವುಗಳನ್ನು ರೈತರ ಬ್ಯಾಂಕ್ ಸಾಲದ ಖಾತೆಗೆ ಹೊಂದಾಣಿಕೆ ಮಾಡದಂತೆ ರಾಜ್ಯ ಸರಕಾರ ಮತ್ತು ರಾಜ್ಯಮಟ್ಟದ ಬ್ಯಾಂಕರ್ಸ್ ಕಮೀಟಿ ಸೂಚಿಸಿವೆ. ಈ ಕುರಿತು ಪತ್ರವನ್ನೂ ಹೊರಡಿಸಿವೆ. ಅದರಂತೆ ಧಾರವಾಡ ಜಿಲ್ಲಾಡಳಿತವು ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಜಿಲ್ಲೆಯ ಪ್ರತಿ ಬ್ಯಾಂಕ್ ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here