ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರ ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಿರುವುದು ಖಂಡನೀಯ ಎಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ 22 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಅಗತ್ಯ ಸೇವೆಗಳ ದರ ಹೆಚ್ಚಳದ ದಾರಿ ಹಿಡಿದಿದೆ. 22 ತಿಂಗಳಲ್ಲಿ 3ನೇ ಬಾರಿ ಹಾಲು-ಮೊಸರಿನ ದರವನ್ನು ಏರಿಕೆ ಮಾಡಿದೆ. ಈ ದುರಾಡಳಿತದ ಸರ್ಕಾರ ಇರುವಷ್ಟು ದಿನ ಜನರಿಗೆ ನೆಮ್ಮದಿಯಿಲ್ಲ. ಈ ಹಿಂದೆ ರೈತರಿಗೆ ಅನುಕೂಲ ಮಾಡುವುದಕ್ಕಾಗಿ ಬೆಲೆಯನ್ನು ಏರಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರೇ ಹೊರತು ಏರಿಸಿದ ದರ ರೈತರಿಗೆ ತಲುಪಲಿಲ್ಲ ಎಂದಿದ್ದಾರೆ.
ಕೂಡಲೇ ಹೆಚ್ಚಿಸಿದ ಹಾಲು-ಮೊಸರಿನ ದರವನ್ನು ಹಿಂದಕ್ಕೆ ಪಡೆಯಬೇಕೆಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಮಾಜಿ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ಜಗನ್ನಾಥಸಾ ಭಾಂಡಗೆ, ಮಂಜುನಾಥ ಶಾಂತಗೇರಿ, ಕೆ.ಪಿ. ಕೊಟೀಗೌಡ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.