ಮಕ್ಕಳ ಹಕ್ಕು ಸಂರಕ್ಷಣೆಗೆ ಮುಂದಾಗಿ : ದಿವ್ಯ ಪ್ರಭು

0
District Child Labor Taskforce Committee Meeting
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಕಾರ್ಮಿಕ ಇಲಾಖೆ ಅಧಿಕಾರಿಗಳು ಇನ್ನೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಬಾಲ ಕಾರ್ಮಿಕರು ಪತ್ತೆಯಾದ ಪ್ರಕರಣಗಳಲ್ಲಿ ದುಡಿಸಿಕೊಳ್ಳುವ ಮಾಲೀಕನೊಂದಿಗೆ ಪತ್ತೆಯಾದ ಮಕ್ಕಳ ಪಾಲಕರ ವಿರುದ್ಧವೂ ಪ್ರಕರಣ ದಾಖಲಿಸಿ, ಅವರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕು.

Advertisement

ಮಾಲೀಕ ಮತ್ತು ಪಾಲಕ ಇಬ್ಬರನ್ನೂ ಜವಾಬ್ದಾರಗೊಳಿಸಿದಾಗ ಇದರ ಗಂಭೀರತೆ ಅರ್ಥವಾಗಿ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣವಾಗುತ್ತದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಮತ್ತು ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆ ಮತ್ತು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೇಡ್ ಮಾಡಿದಾಗ ಸಿಗುವ ಮಕ್ಕಳಿಗೆ ಶಿಕ್ಷಣ, ವಸತಿನಿಲಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿ. ಸರಕಾರದಿಂದ ಅನುಮತಿ ಪಡೆದು ಮಕ್ಕಳ ಉತ್ತಮ ಓದಿಗೆ ಅಗತ್ಯ ಸೌಲಭ್ಯ ಕಲ್ಪಿಸೋಣ. ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು. ಅವರ ಹಕ್ಕು ವ್ಯರ್ಥವಾಗದಂತೆ ಇಲಾಖೆಗಳು ಕೆಲಸ ಮಾಡಬೇಕು. ಪತ್ತೆ ಹಚ್ಚುವ ಪ್ರತಿ ಬಾಲಕಾರ್ಮಿಕರನ ಕುರಿತು ಒಂದು ಅಧ್ಯಯನ ಮಾಡಿ, ಬಾಲ ಕಾರ್ಮಿಕತ್ವಕ್ಕೆ ನಿಖರವಾದ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಗುರುತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಮಾತನಾಡಿ, ಮಾರ್ಕೆಟ್, ಸರ್ಕಲ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರು ಚಿಕ್ಕಮಕ್ಕಳನ್ನು ಮೈಗೆ ಕಟ್ಟಿಕೊಂಡು ಭೀಕ್ಷೆ ಬೇಡುತ್ತಾರೆ. ಇದನ್ನು ನಿಯಂತ್ರಿಸಬೇಕು ಎಂದರು.

ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಸಂಗಮ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕರ ಪತ್ತೆಗಾಗಿ ನಿರಂತರ ತಪಾಸಣೆಯೊಂದಿಗೆ ಕಳೆದ ವರ್ಷ 27 ದಾಳಿಗಳನ್ನು ಮತ್ತು ಪ್ರಸಕ್ತ ವರ್ಷ 34 ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳಲಾಗಿದೆ. 35 ಮಕ್ಕಳನ್ನು ರಕ್ಷಿಸಲಾಗಿದೆ. ಪ್ರಸಕ್ತ ವರ್ಷ 7 ಪ್ರಕರಣ ದಾಖಲಿಸಿ 1.10 ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಬಾಲಕಾರ್ಮಿಕ ಸಂಘದ ಯೋಜನಾಧಿಕಾರಿ ಬಸವರಾಜ ಪಂಚಾಕ್ಷರಿಮಠ ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಹೆಸ್ಕಾಂ ಇಇ ಎಂ.ಎಂ. ನದಾಫ್, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಕಾರ್ಮಿಕ ಅಧಿಕಾರಿಗಳಾದ ಮಾರಿಕಾಂಬಾ, ಲಲಿತಾ ಸಾತೆನಹಳ್ಳಿ ಸೇರಿದಂತೆ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕರು, ಪೊಲೀಸ್ ಅಧಿಕಾರಿಗಳು ಹಾಗೂ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ದೊಡ್ಡದು. ಇಲ್ಲಿನ ಸಣ್ಣ, ಮಧ್ಯಮ ಉದ್ಯಮಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ, ದೈಹಿಕ ಬೆಳವಣಿಗೆ ಕುಂಠಿತವಾಗಿ, ಪ್ರಗತಿಯಿಂದ ಹಿಂದೆ ಉಳಿಯುತ್ತಾರೆ. ಆದ್ದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಇತರ ಇಲಾಖೆ ಅಧಿಕಾರಿಗಳ ಸಹಕಾರ, ಸಮನ್ವಯದಲ್ಲಿ ಇಟ್ಟಂಗಿ ಬಟ್ಟಿ, ಹೊಟೆಲ್, ಬೇಕರಿ, ಖಾನಾವಳಿ ಸೇರಿದಂತೆ ಇತರ ಉದ್ಯಮ ಸ್ಥಳಗಳ ಮೇಲೆ ನಿರಂತರ ದಾಳಿ ಮಾಡಿ, ಮಕ್ಕಳನ್ನು ರಕ್ಷಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

 


Spread the love

LEAVE A REPLY

Please enter your comment!
Please enter your name here