ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸತತ ಮಳೆಯಿಂದ ಮುಂಗಾರಿನ ಬೆಳೆಗಳು ಹಾನಿಗೀಡಾದ ತಾಲೂಕಿನ ರೈತರ ಜಮೀನುಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು.
ತಾಲೂಕಿನ ಮಾಡಳ್ಳಿ ಗ್ರಾಮದ ಬಸನಗೌಡ ಪಾಟೀಲ ಅವರ ಜಮೀನಿನಲ್ಲಿ ಹೆಸರು ಬೆಳೆ ಕಟಾವು ಪ್ರಕ್ರಿಯೆ/ಪ್ರಾತ್ಯಕ್ಷಿಕೆ, ಮಳೆಯಿಂದ ಹಾಳಾದ ಬೆಳೆ, ಯಂತ್ರಗಳ ಸಹಾಯದಿಂದ ಬೆಳೆ ಕಟಾವು ಮಾಡುತ್ತಿರುವುದು, ಒಕ್ಕಲಿಯಾದ ಹೆಸರು ಕಾಳಿನ ಗುಣಮಟ್ಟ ಪರಿಶೀಲಿಸಿದರು.
ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವಿ. ಪಾಟೀಲ ಮತ್ತು ರೈತರನೇಕರು ಸತತ ಮಳೆಯಿಂದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಸೇರಿ ಬಹುತೇಕ ಬೆಳೆಗಳು ಹಾಳಾಗಿವೆ. ಮುಂಗಾರಿನ ಕೃಷಿಗೆ ಮಾಡಿದ ಸಾಲ ತೀರಿಸುವುದು ಹೇಗೆ, ಹಿಂಗಾರಿಗೆ ಮತ್ತೆ ಭೂಮಿ ಹದಗೊಳಸಬೇಕು. ಬದುಕು ಸಾಗಿಸುವುದು ಹೇಗೆಂಬ ಚಿಂತೆಯಲ್ಲಿ ರೈತರಿದ್ದೇವೆ. ಅನಕ್ಷರಸ್ಥ ರೈತರನೇಕರು ಮಾಹಿತಿ ಕೊರತೆಯಿಂದಲೂ, ಅರ್ಥಿಕ ಮುಗ್ಗಟ್ಟಿನಿಂದಲೂ ಬೆಳೆವಿಮೆ ಪಾವತಿಸಿಲ್ಲ. ಸಂಕಷ್ಟದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ರೈತರಿಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸುವ ಮೂಲಕ ಹಿತ ಕಾಪಾಡುವ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಸಂಬಂಧಪಟ್ಟವರು ಬೆಳೆ ಕಟಾವು ಮಾಡಲು ಬಂದ ಸಂದರ್ಭದಲ್ಲಿ ಅವರಿಗೆ ಇಳುವರಿ ಕಡಿಮೆ ತೋರಿಸುವಂತೆ ಒತ್ತಾಯಿಸುವುದು, ಬೆಳೆವಿಮೆಯನ್ನು ಏಜಂಟರಿಗೆ ಕೊಡುವುದು ಸರಿಯಾದ ಕ್ರಮವಲ್ಲ. ಇದು ನಾವು ಮಾಡುವ ಸ್ವಯಂಕೃತ ಅಪರಾಧವಾಗುತ್ತದೆ. ಇದರಿಂದ ಭವಿಷ್ಯದ ದಿನಮಾನಗಳಲ್ಲಿ ವಿಮಾ ಸೌಲಭ್ಯದಿಂದ ವಂಚಿತರಾಗತ್ತಾರೆ ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಉಪತಹಸೀಲ್ದಾರ ಮಂಜುನಾಥ ಅಮಾಸಿ, ಕಂದಾಯ ನಿರೀಕ್ಷಕ ಎನ್.ಎ. ನದಾಫ್, ಸಾಂಖ್ಯಿಕ ಅಧಿಕಾರಿ ಸುರೇಶ ಸಿಂದಗಿ, ಪ್ರಕಾಶ ಸಿಂದಗಿ, ಹನಮಂತ ಚಿಂಚಲಿ, ಫಕ್ಕಣ್ಣ ನಾಯಕರ, ಅಜ್ಜು ಹೂಗಾರ, ಮುತ್ತಪ್ಪ ಪಾಟೀಲ, ಗ್ರಾಮ ಆಡಳಿತಾಧಿಕಾರಿ ಡಿ.ಎಲ್. ವಿಭೂತಿ ಮುಂತಾದವರಿದ್ದರು.
ಅತಿಯಾದ ಮಳೆಯಿಂದ ಗದಗ ಜಿಲ್ಲೆಯಾದ್ಯಂತ ಮುಂಗಾರಿನ ಬೆಳೆಗಳು ಹಾನಿಗೀಡಾಗಿವೆ. ರೈತರು ನಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಖುದ್ದಾಗಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದಿದ್ದಾರೆ. ವಸ್ತುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ. ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.