ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆ ಕೊಮು ಸೌಹಾರ್ದತೆ ಹಾಗೂ ಶಾಂತಿ-ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ರೀಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶನನ್ನು ಕೂರಿಸುವ ಸಂಘ-ಸಂಸ್ಥೆಗಳು ಹಾಗೂ ಮಂಡಳಿಗಳು ಕಾನೂನು ಸುವ್ಯವಸ್ಥೆ ಪಾಲಿಸಿ, ಇಲಾಖೆಗಳ ಅನುಮತಿಯನ್ನು ಪಡೆದುಕೊಳ್ಳಲು ಒಂದೇ ಸ್ಥಳದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಳೀಕರಣಗೊಳಿಸಲು ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಗದಗ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 1ರಿಂದ ಗಣೇಶ ಆಚರಣೆ ಕುರಿತಂತೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಪ್ರತಿ ಬಡಾವಣೆಗಳಲ್ಲಿ ಗಣೇಶ ವಿಸರ್ಜನೆಯು ಒಂದೊಂದು ದಿನ ಮಾಡುವುದರಿಂದ ಕಾನೂನು ಭದ್ರತೆ ಒದಗಿಸುವುದು ಕಷ್ಟ ಸಾಧ್ಯ. ಆದ್ದರಿಂದ ಈ ವರ್ಷ ಗಣೇಶ ವಿಸರ್ಜನೆಯನ್ನು 9ನೇ ದಿನದಂದು ಎಲ್ಲರೂ ಸೇರಿ ಶಾಂತಿಯುತವಾಗಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಪೂರ್ಣಗೊಳಿಸುವಂತೆ ತಿಳಿಸಿದರು.
ಗಣೇಶ ವಿಸರ್ಜನೆಯನ್ನು 9ನೇ ದಿನ ಬೆಳ್ಳಿಗೆ 9 ಗಂಟೆಯಿಂದ ರಾತ್ರಿ 10 ಗಂಟೆಯೊಳಗಾಗಿ ಪೂರ್ಣಗೊಳಿಸಬೇಕು. ದೊಡ್ಡ ಗಾತ್ರದ ಗಣೇಶ ವಿಸರ್ಜನೆಗೆ ಅಗತ್ಯವಿರುವ ಕ್ರೇನ್ ವ್ಯವಸ್ಥೆಯನ್ನು ಒದಗಿಸಲಾಗುವುದು. ವಿಸರ್ಜನೆ ದಿನ ಕೆರೆ, ಹಳ್ಳ, ನದಿ ಹತ್ತಿರ ಸಾರ್ವಜನಿಕರು ಎಚ್ಚರಿಕೆಯಿಂದ ವಿಸರ್ಜನೆಗೆ ಮುಂದಾಗಬೇಕು.
ಗಣೇಶ ವಿಸರ್ಜನೆಯ ಮೆರವಣಿಗೆ ಮಾರ್ಗಗಳನ್ನು ಮೊದಲೇ ನಿಗದಿಪಡಿಸಿ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಒದಗಿಸಬೇಕು. ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಮೆರವಣಿಗೆ ಮಾರ್ಗವನ್ನು ಬದಲಾಯಿಸಕೂಡದು ಎಂದರು.
ರಾಸಾಯನಿಕ ಬಣ್ಣಗಳಿಂದ ಕೂಡಿದ ಹಾಗೂ ಪಿಒಪಿಯಿಂದ ತಯಾರಿಸಿದ ಗಣಪತಿಗಳ ಬದಲಾಗಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾನಗೆ ಗಣೇಶೋತ್ಸವ ಸಮಿತಿಗಳು ಮುಂದಾಗಬೇಕು. ಈ ಮೂಲಕ ನಮ್ಮ ಸುತ್ತಲಿನ ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಗಣೇಶ ಹಬ್ಬದ ಪ್ರಯುಕ್ತ ಹಾಗೂ ವಿಸರ್ಜನೆ ದಿನಗಳಂದು ಮದ್ಯ ಮಾರಾಟ ನಿಷೇಧಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ವಿಸರ್ಜನೆಯ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸದಸ್ಯರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ವಿಸರ್ಜನೆಯ ಅಂತ್ಯದವರೆಗೂ ಅವರುಗಳು ಹಾಜರಿರಬೇಕು. ಉತ್ಸವವನ್ನು ಶಾಂತ ರೀತಿಯಿಂದ ನಡೆಸಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಅವರು, ಇದಕ್ಕೆ ಸೂಕ್ತ ಸಹಕಾರವನ್ನು ಸಂಘಟಕರು ನೀಡಬೇಕೆಂದು ಹೇಳಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಗಣೇಶ ಸಮಿತಿಯ ಮಹಾಮಂಡಳದ ಅಧ್ಯಕ್ಷ ರಾಜು ಮಾತನಾಡಿದರು. ಸಭೆಯಲ್ಲಿ ಜಿ.ಪಂ ಸಿಇಒ ಭರತ್ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಸೌಹಾರ್ದಯುತ ಹಬ್ಬದ ಆಚರಣೆಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿಗಳನ್ವಯ ಗಣೇಶ ಚತುರ್ಥಿ ಆಚರಣೆಗೆ ಮುಂದಾಗೋಣ. ನಿಗದಿಪಡಿಸಿದ ಧ್ವನಿವರ್ಧಕ ಬಳಕೆ ಮಾಡಿ ಶಬ್ದ ಮಾಲಿನ್ಯ ತಪ್ಪಿಸೋಣ. ಗಣೇಶೊತ್ಸವ ಸಮಿತಿಗಳು ಸ್ವಯಂ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಶಾಂತಿಯುತ ಆಚರಣೆಗೆ ಗದಗ ಜಿಲ್ಲೆ ಮತ್ತೊಮ್ಮೆ ಉದಾಹರಣೆಯಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.