ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮತ್ತು ಮಂಗಳವಾರ ಬೆಳಿಗ್ಗೆ ಸುರಿದ ಅಬ್ಬರದ ಗಾಳಿ-ಮಳೆ ಅನೇಕ ಆವಾಂತರಗಳನ್ನು ಸೃಷ್ಟಿಸಿದೆ. ಸಮೀಪದ ಪು.ಬಡ್ನಿ ಹತ್ತಿರದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕೊಚ್ಚಿ ಹೋಗಿದ್ದು, ಅಪಾಯದ ಮಟ್ಟ ಮೀರಿ ಹರಿಯುವ ಹಳ್ಳದಿಂದ ಲಕ್ಷ್ಮೇಶ್ವರ-ದೇವಿಹಾಳ ಸಂಪರ್ಕದ ರಸ್ತೆ ಸಂಪೂರ್ಣ ಸ್ಥಗಿತಗೊಂಡು, ಈ ಭಾಗದ ಜನರು ಸುತ್ತುವರಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಪು.ಬಡ್ನಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಆಗಿರುವ ಅನಾಹುತದ ಬಗ್ಗೆ ವಿವರಿಸಿದರು. ಮುಖಂಡರಾದ ಸುಭಾಸ ಬಟಗುರ್ಕಿ, ಶೇಖಣ್ಣ ಕರೆಣ್ಣವರ, ಸತೀಶಗೌಡ ಪಾಟೀಲ ಅವರು ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿ, ಚೆಕ್‌ಡ್ಯಾಂನಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಇರುವದರಿಂದ ನೀರು ಸರಿಯಾಗಿ ಹರಿಯದೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ವೇಳೆ ಅನಾಹುತಗಳು ಸೃಷ್ಟಿಯಾಗುತ್ತಿವೆ.
ಕಳೆದ ಬಾರಿ ಅರ್ಧ ಪ್ರಮಾಣದ ರಸ್ತೆ ಕಿತ್ತುಹೋಗಿತ್ತು. ಈ ಬಾರಿ ಸೇತುವೆ, ರಸ್ತೆ ಸಂಪೂರ್ಣ ಕಿತ್ತುಹೋಗಿವೆ. ಹಲವಾರು ಬಾರಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹಾಗಿದ್ದರೂ ಯಾವುದೇ ರೀತಿಯ ಕ್ರಮಗಳಿಲ್ಲ ಎಂದರು.
ರೈತರು ಈಗಾಗಲೇ ಹೊಲಗಳನ್ನು ಬಿತ್ತನೆಗಾಗಿ ಹದಗೊಳಿಸಿ ಇಟ್ಟುಕೊಂಡಿದ್ದರು. ಇದೀಗ ಮಳೆಯ ನೀರು ಅಪಾರ ಪ್ರಮಾಣದಲ್ಲಿ ಹರಿದು ನೂರಾರು ಎಕರೆ ಭೂಮಿಯ ಫಲವತ್ತಾದ ಮಣ್ಣು ಕಿತ್ತು ಹೋಗಿದೆ. ಅಲ್ಲದೆ ಅವರಿಗೆ ಬಿತ್ತನೆ ಮಾಡುವುದೂ ಅಸಾಧ್ಯ ಎಂಬಂತಾಗಿದೆ. ಅಪಾಯದ ಮಟ್ಟ ಮೀರಿ ಹರಿಯುವ ಹಳ್ಳದಿಂದ ಲಕ್ಷ್ಮೇಶ್ವರ- ದೇವಿಹಾಳ ಸಂಪರ್ಕದ ರಸ್ತೆ, ಸೇತುವೆಯೂ ಶಿಥಿಲಾವಸ್ಥೆ ತಲುಪಿದ್ದು ವಾಹನ ಸವಾರರು ಮಳೆಗಾಲದಲ್ಲಿ ಜೀವಭಯದಲ್ಲಿ ಸಂಚರಿಸುವಂತಾಗಿದೆ. ಜೀವಹಾನಿಗಳು ಸಂಭವಿಸುವ ಮೊದಲೇ ಗುಣಮಟ್ಟದ ಸೇತುವೆ ನಿರ್ಮಾಣ ಮಾಡುವದಕ್ಕೆ ಆದ್ಯತೆ ನೀಡಿ, ರಸ್ತೆ ಸಂಪರ್ಕಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಭರತ್ ಎಸ್., ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಫಕ್ಕೀರೇಶ ತಿಮ್ಮಾಪೂರ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಪಿಎಸ್‌ಐ ಈರಪ್ಪ ರಿತ್ತಿ, ಗ್ರಾಮಸ್ಥರಾದ ಮುತ್ತಣ್ಣ ಚೋಟಗಲ್, ಭೀಮಣ್ಣ ಬೆಳವಗಿ, ಹನುಮಂತ ಹರಿಜನ, ಶಿವಾನಂದ ಹರಿಜನ, ರಾಜು ಚೋಟಗಲ್, ವಾಗೀಶ ಬಟಗುರ್ಕಿ, ಪರಶುರಾಮ ಯಲವಿಗಿ, ಅಶೋಕ ರಾಮಗೇರಿ, ಶ್ರೀಕಾಂತ ಚೋಟಗಲ್ ಸೇರಿದಂತೆ ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.
ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿಗಳು ಚೆಕ್‌ಡ್ಯಾಂಗಳ ಮೂಲಕ ನೀರು ಹರಿವ ಮಾರ್ಗಗಳನ್ನು ಶೀಘ್ರ ಸ್ವಚ್ಚಗೊಳಿಸುವದು ಅಗತ್ಯವಾಗಿದೆ. ಲೋಕೋಪಯೋಗಿ ಇಲಾಖೆಯವರು ಈ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಕೂಡಲೇ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಅಂದಾಜು ಪತ್ರಿಕೆ ಸಿದ್ಧಪಡಿಸುವಂತೆ ಸೂಚಿಸಿದರು.
ಅಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಂಡು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.